LATEST NEWS
ಏಷ್ಯಾದಲ್ಲಿ ಗೊರಿಲ್ಲ ಸಂತತಿ ಇಲ್ಲ…ಕತ್ತಲಲ್ಲಿ ಕರಡಿ ಕಂಡು ಗೊರಿಲ್ಲ ಎಂದಿರಬಹುದು…..!!
ಉಡುಪಿ ಜನವರಿ 7: ಉಡುಪಿಯ ಕೋಟ ಸಮೀಪದ ವಡ್ಡರ್ಸೆ ಯಲ್ಲಿ ಕರಡಿ ಕಂಡು ಗೊರಿಲ್ಲ ಎಂದು ವದಂತಿ ಹಬ್ಬಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಏಷ್ಯಾ ಖಂಡದಲ್ಲೇ ಗೊರಿಲ್ಲ ಸಂತತಿ ಇಲ್ಲ. ಹೀಗಾಗಿ ವಡ್ಡರ್ಸೆ ಸರಕಾರಿ ಪ್ರೌಢಶಾಲೆ ಬಳಿ ಕಾಣಿಸಿದ್ದು ಕರಡಿ ಇರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಉಡುಪಿಯ ವಡ್ಡರ್ಸೆ ಸರಕಾರಿ ಪ್ರೌಢಶಾಲೆ ಬಳಿ ಬುಧವಾರ ಬೆಳಗಿನ ಜಾವ ಯುವಕನೊಬ್ಬ ಪತ್ರಿಕೆ ವಿತರಿಸಲು ತೆರಳುವ ಸಂದರ್ಭ ಗೊರಿಲ್ಲ ಹೋಲುವ ಪ್ರಾಣಿಯನ್ನು ಕಂಡು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಅಕ್ಷತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಇಲಾಖೆಯವರು ಸ್ಥಳಕ್ಕಾಗಮಿಸುವಾಗ ಆ ಪ್ರಾಣಿ ಸ್ಥಳದಿಂದ ನಾಪತ್ತೆಯಾಗಿದೆ. ಬಳಿಕ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಯನ್ನು ಸಂಪರ್ಕಿಸಿದಾಗ, ಕತ್ತಲಲ್ಲಿ ಕರಡಿಯನ್ನು ನೋಡಿ ಗೊರಿಲ್ಲ ಎಂದು ತಪ್ಪು ಅಂದಾಜಿಸಿರಬಹುದು ಎಂದು ತಿಳಿಸಿದ್ದಾರೆ.
ಗೊರಿಲ್ಲ ಸಂತತಿ ಏಷ್ಯಾದಲ್ಲೇ ಇಲ್ಲ. ಈಶಾನ್ಯ ಭಾರತದಲ್ಲಿ ಹೂಲಾಕ್ ಗಿಬ್ಬನ್ ಎಂಬ ಏಪ್ ಜಾತಿಯ ಪ್ರಾಣಿ ಕಾಣಸಿಗುತ್ತದೆ. ಅವರು ಕರಡಿ ಕಂಡು ಗೊರಿಲ್ಲಾ ಅಂದುಕೊಂಡಿರಬಹುದು ಎಂದು ಕಾರ್ಕಳ-ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ರುದ್ರನ್ ತಿಳಿಸಿದ್ದಾರೆ.