LATEST NEWS
ಉಳ್ಳಾಲ ಪೊಲೀಸ್ ಇನ್ ಸ್ಪೆಕ್ಟರ್ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ

ಉಳ್ಳಾಲ ಜನವರಿ 18: ಉಳ್ಳಾಲ ಪೊಲೀಸ್ ಇನ್ ಸ್ಪೆಕ್ಟರ್ ಸಂದೀಪ್ ಜಿ.ಎಸ್. ಹೆಸರಲ್ಲಿ ಯಾರೋ ನಕಲಿ ಇನ್ಸ್ಟಾ ಗ್ರಾಮ್ ಖಾತೆ ತೆರೆದು ಅವರ ಸ್ನೇಹಿತರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಸಂಗ ನಡೆದಿದೆ. ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಕೆಲ ನಿರ್ವಹಿಸುತ್ತಿರುವ ಸಂದೀಪ್ ಅವರ ಹೆಸರಲ್ಲಿ ನಕಲಿ ಇನ್ಸ್ಟಾ ಗ್ರಾಂ ಖಾತೆ ತೆರೆದಿರುವ ವಂಚಕರು , ಅವರ ಸ್ನೇಹಿತರ ಹತ್ತಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಸಂದೀಪ್ ಅವರ ಸ್ನೇಹಿತರ ಹತ್ತಿರ 7500 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಖದೀಮರು, ನಾಳೆ ಬೆಳಗ್ಗೆ ಹಣ ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಳ್ಳಾಲ ಪೊಲೀಸ್ ಇನ್ ಸ್ಪೆಕ್ಟರ್ ಸಂದೀಪ್ ಜಿ.ಎಸ್., ಇಂದು ಮುಂಜಾನೆ ಕೆಲವು ಗೆಳೆಯರು ಕರೆ ಮಾಡಿ ಇನ್ ಸ್ಟಾಗ್ರಾಂನಲ್ಲಿ ಹಣದ ಬೇಡಿಕೆ ಮೆಸೇಜ್ ಬಂದಿರುವ ಬಗ್ಗೆ ವಿಚಾರಿಸಿದಾಗಲೇ ಇದು ನನ್ನ ಗಮನಕ್ಕೆ ಬಂದಿದ್ದು. ಈ ವಂಚನೆ ಜಾಲವನ್ನು ಪತ್ತೆ ಹಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
