Connect with us

    KARNATAKA

    ಉಡುಪಿ : 203 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ, ತುರ್ತು ಸಹಾಯವಾಣಿ ತೆರೆದ ಜಿಲ್ಲಾಡಳಿದ..!

    ಉಡುಪಿ: ಬಿರು ಬೇಸಿಗೆಯ ಸುಡು ಬಿಸಿಲು ಜೀವ ಸಂಕುಲವನ್ನು ಸುಡುತ್ತಿದ್ದರೆ, ಜೀವಜಲ ನಿಧನವಾಗಿ ಮರೆಯಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ಕುಡಿಯುವ ನೀರಿಗೆ ಅಹಕಾರ ಉಂಟಾಗಿದ್ದು ಅನೇಕ ಕಡೆ ಜಲಕ್ಷಾಮದ ಭೀತಿ ಎದುರಾಗಿದೆ. ಅದರಲ್ಲೂ ಉಡುಪಿ ಜಿಲ್ಲೆಯ 203 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ ತಲೆದೋರಿದೆ.

    ಉಡುಪಿ ಜಿಲ್ಲೆಯಲ್ಲಿ  155 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಒಟ್ಟು 247 ಗ್ರಾಮಗಳಿದ್ದು, ಇವುಗಳಲ್ಲಿ ಬ್ರಹ್ಮಾವರ ತಾಲೂಕಿನ 25 ಗ್ರಾಮ ಪಂಚಾಯತ್‌ಗಳ 42 ಗ್ರಾಮಗಳ 337 ಜನವಸತಿ ಪ್ರದೇಶ, ಕಾಪು ತಾಲೂಕಿನ 10 ಗ್ರಾಮ ಪಂಚಾಯತ್‌ಗಳಲ್ಲಿ 16 ಗ್ರಾಮಗಳ 100 ಜನವಸತಿ ಪ್ರದೇಶ, ಉಡುಪಿ ತಾಲೂಕಿನ 12 ಗ್ರಾಮ ಪಂಚಾಯತ್‌ಗಳ 23 ಗ್ರಾಮಗಳ 164 ವಸತಿ ಪ್ರದೇಶ, ಹೆಬ್ರಿ ತಾಲೂಕಿನ 9 ಗ್ರಾಮ ಪಂಚಾಯತ್‌ಗಳ 15 ಗ್ರಾಮಗಳ 79 ಜನವಸತಿ ಪ್ರದೇಶ, ಕಾರ್ಕಳ ತಾಲೂಕಿನ 21 ಗ್ರಾಮ ಪಂಚಾಯತ್‌ನ 26 ಗ್ರಾಮಗಳ 88 ಜನವಸತಿ ಪ್ರದೇಶ, ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತ್‌ಗಳ 22 ಗ್ರಾಮಗಳ 244 ವಸತಿ ಪ್ರದೇಶ ಹಾಗೂ ಕುಂದಾಪುರ ತಾಲೂಕಿನ 38 ಗ್ರಾಮ ಪಂಚಾಯತ್‌ನ 59 ಗ್ರಾಮಗಳ 415 ಜನವಸತಿ ಪ್ರದೇಶ ಸೇರಿದಂತೆ ಒಟ್ಟು ಜಿಲ್ಲೆಯ 130 ಗ್ರಾಮ ಪಂಚಾಯತ್‌ಗಳ 203 ಗ್ರಾಮಗಳ 1427 ಜನವಸತಿ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ.
    ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಸರ್ಕಾರಿ ಹಾಗೂ ಖಾಸಗಿ ಒಡೆತನದ 70ಕ್ಕೂ ಹೆಚ್ಚು ನೀರು ಲಭ್ಯವಿರುವ ಕೊಳವೆ ಬಾವಿಗಳನ್ನು ಹಾಗೂ 25 ಬಾವಿಗಳನ್ನು ಗುರುತಿಸಲಾಗಿದೆ. ಕಾರ್ಕಳ, ಹೆಬ್ರಿ ಮತ್ತು ಬ್ರಹ್ಮಾವರ ತಾಲೂಕು (ಭಾಗಶಃ) ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಈ ತಾಲೂಕುಗಳಿಗೆ ತಲಾ 25 ಲಕ್ಷ ರೂಪಾಯಿಯಂತೆ ಒಟ್ಟು 75 ಲಕ್ಷ ರೂ. ಅನುದಾನ ಕುಡಿಯುವ ನೀರಿನ ತುರ್ತು ಅಗತ್ಯದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬಿಡುಗಡೆಯಾದೆ. ಅಲ್ಲದೆ ಪ್ರತಿ ತಾಲೂಕಿಗೆ ತಲಾ 20 ಲಕ್ಷ ರೂಪಾಯಿಯಂತೆ ಒಟ್ಟು 140 ಲಕ್ಷ ರೂ. ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಒದಗಿಸಲಾಗಿದೆ.
    ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯತ್‌ ಸರಬರಾಜು ಮಾಡುವ ಕುಡಿಯುವ ನೀರನ್ನು ಅನವಶ್ಯಕವಾಗಿ ಪೋಲು ಮಾಡದೆ ಹಿತಮಿತವಾಗಿ ಬಳಸಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ದುರಸ್ತಿ ಬಂದಲ್ಲಿ ತುರ್ತಾಗಿ ಗ್ರಾಮ ಪಂಚಾಯತ್ ವತಿಯಿಂದ ಕ್ರಮವಹಿಸಲು ಈಗಾಗಲೇ ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಖಾಸಗಿ ಬೋರ್‌ವೆಲ್, ಬಾವಿ ಗುರುತಿಸಿ, ಅವುಗಳನ್ನು ಬಾಡಿಗೆಗೆ ತೆಗೆದುಕೊಂಡು ನೀರು ಒದಗಿಸಲು ಸೂಚಿಸಲಾಗಿದೆ.
    ಎಸ್.ಎಲ್.ಆರ್.ಎಂ ವಾಹನದ ಮೂಲಕ ಅಥವಾ ಖಾಸಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಅನಿವಾರ್ಯತೆ ಉಂಟಾದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತ್ ವತಿಯಿಂದ ಕ್ರಮ ವಹಿಸಲು ಸೂಚಿಸಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಉದ್ಯಾನಗಳಿಗೆ, ವಾಹನ ತೊಳೆಯಲು ಇತ್ಯಾದಿ ಅನ್ಯ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸಿದಲ್ಲಿ ಸ್ಥಳೀಯ ಪಂಚಾಯತ್ ವತಿಯಿಂದ ಸರಬರಾಜಾಗುತ್ತಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ತಿಳಿಸಿದೆ ಎಂದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.
    ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಮಟ್ಟದಲ್ಲಿ ತೆರೆಯಲಾದ 24X7 ಸಹಾಯವಾಣಿ ಸಂಪರ್ಕ ಸಂಖ್ಯೆ 18004257049 ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *