LATEST NEWS
ಉಡುಪಿ ನಗರದಲ್ಲಿ ಕುಡಿಯುವ ನೀರಿಗೆ ಸಂಕಷ್ಟ – ರೇಷನಿಂಗ್ ಪದ್ದತಿ ಜಾರಿಗೆ ಅಧಿಕಾರಿಗಳ ನಿರ್ಧಾರ
ಉಡುಪಿ ಎಪ್ರಿಲ್ 30: ಈ ಬಾರಿಯ ಬೇಸಿಗೆ ಕರಾವಳಿಯ ಜನರನ್ನು ಹೈರಾಣಾಗಿಸಿದೆ. ಮಳೆಗಾಲದಲ್ಲಿ ಸರಿಯಾಗೇ ಬರದ ಮಳೆ ಜೊತೆಗೆ ಇದೀಗ ಬಿರು ಬೀಸಿಲಿನಿಂದಾಗಿ ನೀರಿನ ಮೂಲಗಳು ಬರಿದಾಗುತ್ತಿದೆ. ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷದಂತೆ ಮತ್ತೆ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಸುವರ್ಣ ನದಿಯಲ್ಲಿ ನೀರು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು, ಉಡುಪಿ ನಗರಕ್ಕೆ ಕುಡಿಯುವ ನೀರಿನ ಕೊರತೆಯಾಗುವ ಆತಂಕ ಉಂಟಾಗಿದೆ. ನಗರವಾಸಿಗಳಿಗೆ ನೀರಿನ ಪೂರೈಕೆಯಲ್ಲಿ ರೇಷನಿಂಗ್ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸದ್ಯ ಬಜೆ ಡ್ಯಾಮ್ನಲ್ಲಿರುವ ನೀರಿನ ಪ್ರಮಾಣ ಮೇ 15 ರವರೆಗೆ ಮಾತ್ರ ಬಳಕೆಗೆ ಲಭ್ಯವಾಗಲಿದೆ. ಮಾರ್ಚ್ ತಿಂಗಳಿನ ಪ್ರಾರಂಭದಲ್ಲಿ 5.96 ಮೀಟರ್ ನೀರಿನ ಸಂಗ್ರಹವಿದ್ದ ಡ್ಯಾಮ್ನಲ್ಲಿ ಈಗ 3.61 ಮೀಟರ್ ನೀರಿನ ಮಟ್ಟವಿದೆ. ಹೀಗಾಗಿ ಯಥೇಚ್ಛವಾಗಿ ನೀರನ್ನ ನಗರಸಭೆ ವ್ಯಾಪ್ತಿಯ ನಾಗರಿಕರು ಬಳಸಿದಲ್ಲಿ ಮೇ ತಿಂಗಳಿನ ಅಂತ್ಯದ ಒಳಗೆ ಡ್ಯಾಮ್ನ ನೀರು ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ. ಹೀಗಾಗಿ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರನ್ನು ಪೋಲಾಗದಂತೆ ಸಮರ್ಪಕವಾಗಿ ಬಳಸಿಕೊಳ್ಳುವ ಅನಿವಾರ್ಯತೆ ನಗರಸಭೆಗಿದೆ.
ನಗರಸಭಾ ವ್ಯಾಪ್ತಿಯನ್ನು 3 ವಲಯಗಳನ್ನಾಗಿ ವಿಂಗಡಿಸಿದ್ದು, ಪರ್ಯಾಯ ದಿನಗಳಂದು ನೀರು ಬಿಡುವುದಕ್ಕೆ ಯೋಚಿಸಲಾಗಿದೆ. ಸದ್ಯ ಶಿರೂರು ಭಾಗದಲ್ಲಿ ನದಿಯ ತಗ್ಗು ಹೊಂಡೆಗಳಲ್ಲಿರುವ ನೀರನ್ನು ಪಂಪ್‌ಗಳ ಮೂಲಕ ಕೆಳಗಿನ ಬಜೆ ಅಣೆಕಟ್ಟೆಗೆ ಹರಿಸಲಾಗುತ್ತಿದೆ. ಆದರೆ ಹೊಂಡಗಳಲ್ಲಿ ನೀರು ಖಾಲಿಯಾಗುತ್ತಿದ್ದಂತೆ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಕಳೆದ ವರ್ಷವೂ ಸುಮಾರು 20 ದಿನಗಳ ಕಾಲ ನೀರಿನ ಸಮಸ್ಯೆ ಉಂಟಾಗಿದ್ದು, ನಗರದ ಅನೇಕ ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿಯೂ ಅಗತ್ಯವಿದ್ದಲ್ಲಿ ಟ್ಯಾಂಕರ್‌ಮೂಲಕ ನೀರು ಪೂರೈಕೆಗೂಸಿದ್ದತೆಗಳನ್ನು ಮಾಡಲಾಗಿದೆ.