Connect with us

LATEST NEWS

ಉಡುಪಿ ಜಿಲ್ಲೆಯಲ್ಲಿ 10,245 ಹೊಸ ಯುವ ಮತದಾರರು –  ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಉಡುಪಿ, ಜನವರಿ 22: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜನವರಿ 01 ಅರ್ಹತಾ ದಿನಾಂಕವನ್ನಾಗಿಸಿಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ 10,245 ಯುವ ಮತದಾರರು ಹೊಸದಾಗಿ ನೋಂದಣಿಯಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯ ಪ್ರತಿಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಹಸ್ತಾಂತರಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಬೈಂದೂರು, ಕಾಪು, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ ಸಹಾಯಕ ಕಮೀಷನರ್, ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಎಲ್ಲಾ ಮತದಾರರು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.
ಈಗಲೂ ಹೊಸದಾಗಿ ಮತದಾರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತೆಗೆದು ಹಾಕಲು ಚುನಾವಣಾ ಘೋಷಣೆಯವರೆಗೆ ಅವಕಾಶವಿದ್ದು, ಅರ್ಹತೆ ಹೊಂದುವ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಚುನಾವಣೆಯ ಕೊನೆಯ ಕ್ಷಣಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿಲ್ಲ ಎಂದರೆ ಸೇರ್ಪಡೆಗೆ ಅವಕಾಶವಿರುವುದಿಲ್ಲ. ಚುನಾವಣಾ ಆಯೋಗ ನೀಡುವ ಕಾಲಾವಧಿ ಒಳಗೆ ನೋಂದಣಿ ಮಾಡಿಸಿಕೊಳ್ಳುವುದು ಸೂಕ್ತ ಎಂದರು. ಕರಡು ಮತದಾರರ ಪಟ್ಟಿಯಲ್ಲಿ 5,00,924 ಮಹಿಳೆಯರು, 5,36,737 ಮಹಿಳೆಯರು, 16 ತೃತೀಯ ಲಿಂಗದವರು ಸೇರಿದಂತೆ 10,37,677 ಮತದಾರರಿದ್ದು, ಪರಿಷ್ಕರಿಸಿ ಅಂತಿಮ ಮತದಾರರ ಪಟ್ಟಿಯಲ್ಲಿ 5,04,448 ಪುರುಷರು, 5,40,833 ಮಹಿಳೆಯರು ಹಾಗೂ 15 ತೃತೀಯ ಲಿಂಗದವರು ಸೇರಿದಂತೆ 10,45,296 ಅರ್ಹ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಇದ್ದಾರೆ ಎಂದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ನಮೂನೆ-6 ಸೇರ್ಪಡೆಗೆ 13,553, ನಮೂನೆ 6-ಎ ಎನ್.ಆರ್.ಐ ಸೇರ್ಪಡೆಗೆ 6, ನಮೂನೆ-8 ರಲ್ಲಿ 3362 ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು, ಒಟ್ಟು 16901 ಅರ್ಜಿಗಳು ಬಂದಿದ್ದರೆ, ನಮೂನೆ-7 ರಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲು 9282 ಅರ್ಜಿಗಳು ಹಾಗೂ ನಮೂನೆ-8 ರಲ್ಲಿ ತಿದ್ದುಪಡಿಗೆ 16,901 ಅರ್ಜಿಗಳು ಸ್ವೀಕೃತವಾಗಿದ್ದವು ಎಂದರು.
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾರರ ಪಟ್ಟಿಗೆ ಕುರಿತ ಮಾಹಿತಿಗಳನ್ನು ಸಾರ್ವಜನಿಕರು ಪಡೆಯಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೇಂದ್ರ ಟೋಲ್ ಫ್ರೀ ನಂಬರ್ 1950 ಗೆ ಉಚಿತ ಕರೆಗಳನ್ನು ಮಾಡುವ ಮೂಲಕ ಮಾಹಿತಿಗಳನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಅಂತಿಮ ಮತದಾರರ ಪಟ್ಟಿಯನ್ನು ವಿತರಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ತಾಲೂಕಿನ ಎಲ್ಲಾ ತಹಶೀಲ್ದಾರ್, ಬಿ.ಜೆ.ಪಿಯ ಚಂದ್ರಶೇಖರ್ ಪ್ರಭು, ಕಾಂಗ್ರೇಸ್‌ನ ಹಬೀಬ್ ಅಲಿ, ಜೆ.ಡಿ.ಎಸ್ ನ ಜಯರಾಮ್ ಆಚಾರ್ಯ, ಆಮ್ ಆದ್ಮಿ ಪಕ್ಷದ ಅರುಣ್ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Share Information
Continue Reading
Advertisement
Click to comment

Leave a Reply

Your email address will not be published. Required fields are marked *