Connect with us

KARNATAKA

ಉಡುಪಿ : ನೇಜಾರು ಸಾಮೂಹಿಕ ಹತ್ಯೆ ಪ್ರಕರಣ: ಪೊಲೀಸರಿಂದ ಮುಂದುವರೆದ ತನಿಖೆ, ಸೌದಿಯಿಂದ ಉಡುಪಿ ತಲುಪಿದ ಕುಟುಂಬ ಯಜಮಾನ..!

ಉಡುಪಿ : ಉಡುಪಿ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ, ಈ ಸಂಬಂಧ 5 ತಂಡಗಳನ್ನು ರಚಿಸಲಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

ಈಗಾಗಲೇ ಹಂತಕ ಹೋಗಿರುವ ಮಾರ್ಗದಲ್ಲಿರುವ ಸಿಸಿಟಿವಿ ಫುಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆತ ಕೊಲೆಗೈದು ನೇಜಾರಿನಿಂದ ಸಂತೆಕಟ್ಟೆಗೆ, ಸಂತೆಕಟ್ಟೆಯಿಂದ ಉಡುಪಿಗೆ, ಉಡುಪಿಯಿಂದ ಉದ್ಯಾವರದವರೆಗೆ ಹೋಗಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಆತ ರಿಕ್ಷಾ ಮತ್ತು ಬೇರೆ ಬೇರೆ ಬೈಕಿನಲ್ಲಿ ಪ್ರಯಾಣಿಸಿರುವುದು ಸಿಟಿಟಿವಿ ದೃಶ್ಯಾವಳಿ ಯಿಂದ ಕಂಡುಬಂದಿದೆ. ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಂತಕ ಸುಪಾರಿ ಕಿಲ್ಲರ್ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಆ ದಿಕ್ಕಿನಲ್ಲಿ ಪೊಲೀಸ್ ತಂಡ ತನಿಖೆ ಮುಂದುವರೆಸಿದೆ. ಈವರೆಗೆ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಕೊಲೆ ನಡೆದ ಮಾಹಿತಿ ತಿಳಿದ ಬೆನ್ನಿಗೇ ಕುಟುಂಬದ ಯಜಮಾನ ನೂರ್ ಮೊಹಮ್ಮದ್ ಅವರು ಅಲ್ಲಿಂದ ಹೊರಟಿದ್ದು ಸೋಮವಾರ ಬೆಳಗ್ಗೆ ಉಡುಪಿ ತಲುಪಿದ್ದಾರೆ. ಇದೇವೇಳೇ ಬೆಂಗಳೂರಿನ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿರುವ ಕುಟುಂಬದ ಹಿರಿಯ ಪುತ್ರ ಮೊಹಮ್ಮದ್‌ ಅಸಾದ್‌ ಕೂಡಾ ಆಗಮಿಸಿದ್ದು ಇಂದು ಉಡುಪಿ 2 ಮಸೀದಿಗಳಲ್ಲಿ ಅಂತ್ಯ ಕ್ರೀಯೆಯ ವಿಧಿವಿಧಾನಗಳು ನಡೆಯಲಿವೆ. .

ಇನ್ನು ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ನೇಜಾರಿನ ಶ್ಯಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಆರೋಪಿ ಬೋಳು ತಲೆ, ಬಿಳಿ ಬಣ್ಣದ ವ್ಯಕ್ತಿಯಾಗಿದ್ದು, ಮಾಸ್ಕ್ ಧರಿಸಿ ಬಂದಿದ್ದರು. ಬ್ಯಾಗ್‌ ಹಾಕಿಕೊಂಡು ಬೈಕ್‌ ನಲ್ಲಿ ಬಂದು ಇಳಿದಿದ್ದರು. ಹೂವಿನ ಮಾರ್ಕೆಟ್ ಬಳಿ ನನ್ನ ಆಟೋ ನಿಲ್ಲಿಸಿದ ಅವರು ತನ್ನನ್ನು ತೃಪ್ತಿ ಲೇ ಔಟ್ಗೆ ಬಿಡಿ ಎಂದಿದ್ದರು. ಕನ್ನಡ ಭಾಷೆ ಮಾತನಾಡುತ್ತಿದ್ದರು. ನನಗೆ ದಾರಿ ತಪ್ಪಿದಾಗ ಅವರೇ ಬೋರ್ಡ್ ತೋರಿಸಿ ಇಲ್ಲೇ ಬಿಡಿ ಎಂದಿದ್ದರು. ನಾನು ಮೀಟರ್ ಚಾರ್ಜ್ ಬಾಡಿಗೆ ತೆಗೆದುಕೊಂಡು ಅಲ್ಲಿಂದ ವಾಪಾಸ್ ಬಂದಿದ್ದೆ. ಕೊಲೆಗಾರ ಆ ಮನೆಗೆ ಹೋಗಿ ಅಲ್ಲಿಂದ 15 ನಿಮಿಷದೊಳಗೆ ವಾಪಸ್ ಬಂದಿದ್ದರು. ಬೇರೊಂದು ಆಟೋದಲ್ಲಿ ಹತ್ತಿದರು ಆ ಸಂದರ್ಭದಲ್ಲಿ ನಾನು ಅವರ ಬಳಿ ಹೋಗಿ ನೀವು ನಿಲ್ಲಿಸಿ ಎಂದಿದ್ದರೆ ನಾನು ನಿಲ್ಲುತ್ತಿದ್ದೆ ಎಂದು ಹೇಳಿದೆ. ಅದಕ್ಕೆ ಪರ್ವಾಗಿಲ್ಲ ಎಂದು ಹೇಳಿ ತಾನು ಹತ್ತಿದ ಆಟೋ ಚಾಲಕನ ಬಳಿ ಪಾಸ್ಟ್ ಹೋಗಿ ಅಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಕೆಮ್ಮಣ್ಣು ನೇಜಾರಿನ ನಿವಾಸಿ ನೂರ್‌ ಮಹಮ್ಮದ್‌ ಅವರ ಕುಟುಂಬದ ಮೇಲೆ ಈ ಭೀಕರ ದಾಳಿ ನಡೆದಿತ್ತು. ನೂರ್‌ ಮಹಮ್ಮದ್‌ ಅವರು ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್‌ (23), ಆಝ್ನಾನ್‌ (21) ಮತ್ತು ಅಸೀಮ್‌ (14) ಅವರನ್ನು ಆಗಂತುಕನೊಬ್ಬ ಭಾನುವಾರ ಬೆಳಗ್ಗೆ ಕೊಲೆ ಮಾಡಿದ್ದಾನೆ. ಈ ಕುಟುಂಬದ ಹಿರಿಯ ಮಗ ಅಸಾದ್‌ ಬೆಂಗಳೂರಿನಲ್ಲಿ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಅಫ್ನಾನ್‌ ಏರ್‌ಹೋಸ್ಟೆಸ್‌ ಆಗಿ ಕೆಲಸ ಮಾಡುತ್ತಿದ್ದು, ಶನಿವಾರವಷ್ಟೇ ಬೆಂಗಳೂರಿನಿಂದ ಮನೆಗೆ ಬಂದಿದ್ದಳು. ಭಾನುವಾರ ಮುಂಜಾನೆ 8.20ರ ಸುಮಾರಿಗೆ 45ರ ಆಸುಪಾಸಿನ ದೃಢಕಾಯ, ಕಂದು ಬಣ್ಣದ ಷರ್ಟು ಮತ್ತು ಬಿಳಿ ಬಣ್ಣದ ಮಾಸ್ಕ್‌ ಹಾಕಿಕೊಂಡ ವ್ಯಕ್ತಿ ಉಡುಪಿಯ ಸಂತೆಕಟ್ಟೆ ರಿಕ್ಷಾ ಸ್ಟಾಂಡ್‌ಗೆ ಬಂದಿದ್ದಾನೆ. ಅಲ್ಲಿಂದ ತೃಪ್ತಿ ನಗರಕ್ಕೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾನೆ. ಮನೆಯ ವಿಳಾಸವನ್ನು ಸ್ಪಷ್ಟವಾಗಿ ಹೇಳಿದ್ದ ಆ ವ್ಯಕ್ತಿ ಆಟೊ ಚಾಲಕ ಶ್ಯಾಮ್‌ ಅವರಿಗೆ ದಾರಿ ತಪ್ಪಿದಾಗಲೂ ಮತ್ತೆ ಸರಿ ದಾರಿ ತೋರಿಸಿದ್ದಾನೆ. ಶ್ಯಾಮ್‌ ಅವರು ಆತನನ್ನು ತೃಪ್ತಿ ನಗರದಲ್ಲಿ ಬಿಟ್ಟು ಬಂದ ಕೇವಲ 15 ನಿಮಿಷದಲ್ಲಿ ಅಂದರೆ 8.48ರ ಹೊತ್ತಿಗೆ ಆತ ಯಾರದೋ ಬೈಕ್‌ನಲ್ಲಿ ಲಿಫ್ಟ್‌ ಪಡೆದುಕೊಂಡು ಮರಳಿ ಸಂತೆಕಟ್ಟೆಗೆ ಬಂದಿದ್ದಾನೆ. ಅಲ್ಲಿಂದ ಎಲ್ಲಿ ಹೋಗಿದ್ದಾನೆ ಎನ್ನುವುದು ಸ್ಪಷ್ಟವಾಗಿಲ್ಲ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *