KARNATAKA
ಉಡುಪಿ : ಜಿಲ್ಲೆಯ C.N.G ಸಮಸ್ಯೆ ಪರಿಹಾರಕ್ಕೆ ಸಂಸದರ ಯತ್ನ, ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಭೇಟಿಯಾದ ಕೋಟ
ಉಡುಪಿ : ಉಡುಪಿ ಜಿಲ್ಲೆಯಲ್ಲಿನ C.N.G ಸಮಸ್ಯೆ ಪರಿಹಾರಕ್ಕೆ ಸಂಸದ ಕೋಟ ಪ್ರಯತ್ನಿಸುತ್ತಿದ್ದು ಈ ಹಿನ್ನಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಭೇಟಿಯಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ C.N.G ಗ್ಯಾಸ್ ಕೊರತೆಯಿಂದ ಬಡ ರಿಕ್ಷಾ ಚಾಲಕರು ಮತ್ತು ಇತರ C.N.G ಬಳಕೆಯ ವಾಹನ ಮಾಲೀಕರು ಪರದಾಡುವಂತಾಗಿದೆ. ದಿನಗಟ್ಟಲೆ ವಾಹನ ಸವಾರರು C.N.G ಬಂಕ್ ನೆದುರು ಪೂರೈಕೆಗಾಗಿ ನಿಲ್ಲುತ್ತಿದ್ದಾರೆ.
ಆದ್ದರಿಂದ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ, ಸಮಸ್ಯೆ ಪರಿಹರಿಸಬೇಕೆಂದು ಸಂಸದ ಕೋಟ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲೆಯಲ್ಲಿ 21,000 KG C.N.G ಬೇಡಿಕೆ ಇದ್ದು ಇದೀಗ 14,000 KG ಪೂರೈಕೆಯಾಗುತ್ತಿದೆ. 8 C.N.G ಬಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು ಹೆಚ್ಚುವರಿ ಬಂಕಗಳನ್ನು ಮಂಜೂರು ಮಾಡಬೇಕೆಂದು ಮತ್ತು C.N.G ಬೇಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ಸಂಬಂಧಿತ ಕಂಪನಿಗಳಿಗೆ ಆದೇಶ ನೀಡಬೇಕೆಂದು ಸಚಿವರಿಗೆ ಮನವರಿಕೆ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವರು ಕೂಡಲೆ ಕ್ರಮ ಜರುಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು.