LATEST NEWS
ಉಡುಪಿ ಮಲ್ಪೆ ಸೇಂಟ್ ಮೇರಿಸ್ ದ್ವೀಪದಲ್ಲಿ ಅಧಿಕಾರಿಗಳ ಭರ್ಜರಿ ಪಾರ್ಟಿ……!?

ಉಡುಪಿ ಮಲ್ಪೆ ಸೇಂಟ್ ಮೇರಿಸ್ ದ್ವೀಪದಲ್ಲಿ ಅಧಿಕಾರಿಗಳ ಭರ್ಜರಿ ಪಾರ್ಟಿ……!?
ಉಡುಪಿ: ಕೊರೊನಾದಿಂದಾಗಿ ಇಡೀ ದೇಶ ಲಾಕ್ ಡೌನ್ ನಲ್ಲಿದ್ದು, ಜನರಿಗೆ ಮನೆಯಿಂದ ಹೊರಗೆ ಬರದಂತೆ ಆದೇಶ ಹೊರಡಿಸಿರುವ ಸರಕಾರಿ ಅಧಿಕಾರಿಗಳೇ ಕಾನೂನು ಉಲ್ಲಂಘಿಸಿ ಪಾರ್ಟಿ ನಡೆಸಿರುವ ಘಟನೆ ಕೊರೊನಾ ಗ್ರೀನ್ ಝೋನ್ ಉಡುಪಿಯಲ್ಲಿ ನಡೆದಿದೆ.
ಕೊರೊನಾ ಗ್ರೀನ್ ಝೋನ್ ಉಡುಪಿಯಲ್ಲಿ ಲಾಕ್ ಡೌನ್ ನನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಯಾರೂ ಜಿಲ್ಲೆಗೆ ಬರದಂತೆ ಹಾಗೂ ಜಿಲ್ಲೆಯ ಜನರು ಅನವಶ್ಯಕವಾಗಿ ಹೊರಗಡೆ ತಿರುಗಾಡದಂತೆ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಆದರೆ ಅಧಿಕಾರಿಗಳಿಗೆ ಮಾತ್ರ ಈ ಕಾನೂನ, ಕಟ್ಟಳೆ ನಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದೇ ಉಡಾಫೆಯಲ್ಲಿ ಮಲ್ಪೆಯ ಸೇಂಟ್ ಮೇರೀಸ್ ದ್ವೀಪದಲ್ಲಿ ಭರ್ಜರಿ ಎಣ್ಣೆ ಪಾರ್ಟಿ ನಡೆಸಿದ ಏಳು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದರಲ್ಲೂ ಅವರೆಲ್ಲ ಸ್ಥಳೀಯ ಅಧಿಕಾರಿಗಳೇ..!

ಮಲ್ಪೆ ಬೀಚ್ ಅಭಿವೃದ್ಧಿ ಸದಸ್ಯರೊಬ್ಬರು ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಸೇರಿ ಈ ಕೆಲಸ ಮಾಡಿದವರು. ಮಲ್ಪೆ ಬೀಚ್ನಿಂದ 8 ಕಿ.ಮೀ.ದೂರದಲ್ಲಿ ಸಮುದ್ರ ಮಧ್ಯೆ ಇರುವ ಸೇಂಟ್ ಮೇರಿಸ್ ದ್ವೀಪದಲ್ಲಿ ಇವರು ರಾತ್ರಿಯೆಲ್ಲ ಮದ್ಯದ ಪಾರ್ಟಿಯಲ್ಲಿ ಬಿಜಿಯಾಗಿದ್ದರು.
ರಾತ್ರಿ 9.30ರಿಂದ 11ಗಂಟೆಯವರೆಗೂ ದ್ವೀಪದ ಬಳಿ ಬೆಳಕು ಉರಿಯುತ್ತಿರುವುದನ್ನು ನೋಡಿದ ಸ್ಥಳೀಯರು ಮಲ್ಪೆ ಪೊಲೀಸರು ಮತ್ತು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ಒಂದು ಗಂಟೆವರೆಗೆ ಕಾದರೂ ದ್ವೀಪದಲ್ಲಿ ಇದ್ದವರು ಹೊರ ಬಾರದ ಕಾರಣ ಕರಾವಳಿ ಕಾವಲು ಪೊಲೀಸರು ಗಸ್ತು ಬೋಟ್ನಲ್ಲಿ ತೆರಳಿ ಆ ಏಳೂ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ಉಡುಪಿ, ಮಂಗಳೂರು ನೋಂದಣಿಯ ಎರಡು ಕಾರುಗಳನ್ನೂ ವಶಕ್ಕೆ ಪಡೆದುಕೊಂಡಿದ್ದರು.
ಈ ಏಳೂ ಮಂದಿಯ ಹೇಳಿಕೆ ಪಡೆದ ಪೊಲೀಸರು ಅವರನ್ನೀಗ ಬಿಟ್ಟುಕಳಿಸಿದ್ದಾರೆ. ಸಾರ್ವಜನಿಕರಿಗೆ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವುದು ಮತ್ತು ರಾತ್ರಿ ಅಲ್ಲಿ ವಾಸ್ತವ್ಯ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ.