LATEST NEWS
ಬಿ.ಆರ್ ಶೆಟ್ಟಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಸಿಬ್ಬಂದಿಗಳಿಂದ ಪ್ರತಿಭಟನೆ – ಆಡಳಿತ ಮಂಡಳಿ ವಿರುದ್ದ ಶಾಸಕ ರಘುಪತಿ ಭಟ್ ಗರಂ

ಉಡುಪಿ ಅಗಸ್ಟ್ 20: ಸರಕಾರದಿಂದ ಅನುದಾನ ಬಿಡುಗಡೆಯಾದರೂ ಸಿಬ್ಬಂದಿಗಳಿಗೆ ಸಂಬಳ ನಿಡದ ಬಿ ಆರ್ ಶೆಟ್ಟಿ ಹೆರಿಗೆ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ದ ಆಸ್ಪತ್ರೆಯ ಸಿಬ್ಬಂದಿಗಳು ಧರಣಿ ನಡೆಸಿದ್ದು, ಸ್ವತಃ ಶಾಸಕ ರಘುಪತಿ ಭಟ್ ಈ ಧರಣೆಗೆ ಸಾಥ್ ಕೊಟ್ಟ ಘಟನೆ ನಡೆದಿದೆ.
ಸರಕಾರಿ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿಯವರು ಮರು ನಿರ್ಮಾಣ ಮಾಡಿ ಅದರ ನಿರ್ವಹಣೆಯನ್ನು ನಡೆಸುತ್ತಿದ್ದರು. ಆದರೆ ಬಿ.ಆರ್ ಶೆಟ್ಟಿ ಆರ್ಥಿಕ ಸಂಕಷ್ಟ ಸಿಲುಕಿದ ಹಿನ್ನಲೆ ಆಸ್ಪತ್ರೆಯ ನಿರ್ವಹಣೆಯನ್ನು ಕೈಬಿಟ್ಟಿದ್ದು, ಆಸ್ಪತ್ರೆಯಲ್ಲಿ ದುಡಿಯುತ್ತಿದ್ದ ಸಿಬ್ಬಂದಿಗಳಿಗೆ ಸರಿಯಾದ ಸಂಬಳ ನೀಡಿರಲಿಲ್ಲ. ಈ ನಡುವೆ ಇದೇ ವಿಚಾರವಾಗಿ ಸಿಬ್ಬಂದಿಗಳು ಧರಣಿ ನಡೆಸಿದ್ದರು. ನಂತರ ಮಧ್ಯ ಪ್ರವೇಶಿಸಿದ ಶಾಸಕ ರಘುಪತಿ ಭಟ್ ಬಾಕಿ ಇರುವ ವೇತನ ಪಾವತಿಸುವ ನಿಟ್ಟಿನಲ್ಲಿ ಸುವರ್ಣ ಆರೋಗ್ಯ ಟ್ರಸ್ಟ್ನಿಂದ 50ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿದ್ದು, ಈ ಹಣದಲ್ಲಿ ನೌಕರರಿಗೆ ಸಂಬಳ ನೀಡಲು ತಿಳಿಸಲಾಗಿತ್ತು, ಆದರೆ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ಸಂಬಳ ನೀಡದೆ ಬೇಜವಬ್ದಾರಿಯಿಂದ ವರ್ತಿಸಿದ್ದರು. ಈ ಹಿನ್ನಲೆ ಇಂದು ಮತ್ತೆ ಸಿಬ್ಬಂದಿಗಳು ಧರಣಿ ನಡೆಸಿದ್ದರು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಆಸ್ಪತ್ರೆಗೆ ಬಂದು ಮಾಹಿತಿ ಪಡೆದುಕೊಂಡರು.
ಮೂರು ತಾಸು ಕಾದರೂ ಆಸ್ಪತ್ರೆಯ ಆಡಳಿತ ಮಂಡಳಿಯವರು ಬಾರದ ಹಿನ್ನೆಲೆಯಲ್ಲಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನೌಕರರ ಧರಣಿಗೆ ಶಾಸಕ ರಘುಪತಿ ಭಟ್ ಸಾಥ್ ನೀಡಿ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ದೂರವಾಣಿ ಮೂಲಕ ಜಿಲ್ಲಾಧಿಕಾರಿಯೊಂದಿಗೆ ಶಾಸಕರು ಮಾತುಕತೆ ನಡೆಸಿದರು. ಈ ವೇಳೆ ಡಿಸಿ ನಾಳೆ ಸಭೆ ಕರೆದು ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಪೂರ್ಣ ಸಂಬಳ ನೀಡುವವರೆಗೆ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಮುಂದುವರೆಸುವುದಾಗಿ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.