LATEST NEWS
ಮಳೆಗೆ ತತ್ತರಿಸಿದ ಉಡುಪಿ ಜಿಲ್ಲೆ – ಗುಡ್ಡ ಕುಸಿದು ಮಹಿಳೆ ಸಾವು

ಕುಂದಾಪುರ ಜುಲೈ 05: ಮುಂಗಾರು ಮಳೆಗೆ ಉಡುಪಿ ಜಿಲ್ಲೆ ತತ್ತರಿಸಿದ್ದು, ಭಾರೀ ಬಿರುಗಾಳಿ ಜೊತೆಗೆ ಮಳೆಯಾಗುತ್ತಿದ್ದು, ಅಪಾರ ಪ್ರಮಾಣ ಆಸ್ತಿಪಾಸ್ತಿ ಹಾನಿಯಾಗಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಭಾರಿ ಮಳೆಯಾದ ಪರಿಣಾಮ ಹಲವು ಗ್ರಾಮಗಳು ಜಲಾವೃತಗೊಂಡಿದೆ. ಈ ನಡುವೆ ಮಳೆಯ ಅಬ್ಬರಕ್ಕೆ ಕೊಲ್ಲೂರಿನಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಹಳ್ಳಿಬೇರು ನಿವಾಸಿ ಅಂಬಾ (45) ಎಂಬವರು ಮೃತಪಟ್ಟಿದ್ದಾರೆ. ಮೃತದೇಹವನ್ನು ಮಣ್ಣಿನಿಂದ ಮೇಲೆತ್ತಲಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ಕ್ಷೇತ್ರದ ನಾವುಂದ ಸಾಲ್ಬುಡ ಮತ್ತು ಕಾವ್ರಾಡಿ ಭಾಗದ ಹತ್ತಾರು ಹಳ್ಳಿಗಳು ನೆರೆಪ್ರಕೋಪಕ್ಕೆ ನಲುಗಿದೆ. ಸಾವಿರಾರು ಎಕರೆ ಕೃಷಿಭೂಮಿ, ಕೃಷಿತೋಟ ಜಲಾವ್ರತಗೊಂಡಿದೆ. ಮಾರಣಕಟ್ಟೆಯ ಬ್ರಹ್ಮಗುಂಡಿ, ಕಮಲಶಿಲೆಯ ಕುಬ್ಜಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬ್ರಹ್ಮಗುಂಡಿ ನದಿ ಉಕ್ಕಿ ಹರಿದು ಮಾರಣಕಟ್ಟೆ ದೇವಳ ಪ್ರವೇಶಿಸಿದೆ. ಬಾಂಡ್ಯ ಸನಿಹದ ಹಾರ್ಮಣ್ಣು ಸಂಪರ್ಕ ಸೇತುವೆ ಮುಳುಗಿದ್ದು ಸಂಪರ್ಕ ಸಂಕಷ್ಟ ಎದುರಾಗಿದೆ. ವಂಡ್ಸೆ ವ್ಯಾಪ್ತಿಯಲ್ಲಿನೂರಾರು ಎಕರೆ ಕೃಷಿಭೂಮಿ ಜಲಾವ್ರತಗೊಂಡಿದೆ. ಸೌಕೂರು ಸನಿಹದ ಕುಚ್ಚಟ್ಟು ಎಂಬಲ್ಲಿ ಹತ್ತಾರು ಮನೆಗಳು ಜಲಬಂಧಿಯಾಗಿವೆ. ಬೆಳ್ಳಾಲ ಮೂಡುಮುಂದ ಎಂಬಲ್ಲಿ ಮುಖ್ಯರಸ್ತೆ ನೀರಿನಲ್ಲಿ ಮುಳುಗಿದ್ದು ಸಂಚಾರ ತಾಪತ್ರಯ ಉಂಟಾಗಿದೆ.

ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಮೀಪದ ಕುಬ್ಜಾ ನದಿಯ ನೆರೆ ನೀರು ಉಕ್ಕಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಮೀಪದ ಕುಬ್ಜಾ ನದಿಯ ನೆರೆ ನೀರು ಉಕ್ಕಿ ಹರಿದು ದೇವರ ಪಾದ ಸ್ಪರ್ಶ ಮಾಡಿದೆ.