LATEST NEWS
ಸಂಸತ್ತಿನಲ್ಲಿ ಘಮಘಮಿಸಿದ ಉಡುಪಿ ಅಡುಗೆ…ಬಾಳೆ ಏಲೆಯಲ್ಲಿ ಊಟ ಸವಿದ ಪ್ರಧಾನಿ ಮೋದಿ….!!

ದೆಹಲಿ ಅಗಸ್ಟ್ 04: ಇಡೀ ಜಗತ್ತಿಗೆ ಅಡುಗೆ ವಿಚಾರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಡುಪಿ ಅಡುಗೆ ಇದೀಗ ದೇಶದ ಶಕ್ತಿ ಕೇಂದ್ರ ಸಂಸತ್ತಿನಲ್ಲಿ ಘಮಘಮಿಸಿದೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಾಳೆ ಎಲೆಯಲ್ಲಿ ಬಡಿಸಿದ ಉಡುಪಿ ಸಾರು, ಪತ್ತೊಡೆ, ಸುಕುರುಂಡೆ, ಹಲಸಿನ ಹಣ್ಣಿನ ಗಟ್ಟಿ, ತಿಮರೆ ಚಟ್ಟಿ ಮೊದಲಾದವುಗಳವುಗಳನ್ನು ಸವಿದು ಮೆಚ್ಚಿದ್ದಾರೆ. ಗುರುವಾರ ಸಂಸತ್ ಭವನದ ಒಳಾಂಗಣದಲ್ಲಿ ನಡೆದ ಎನ್‌ಡಿಎ ಸಂಸದರ ಸಭೆಯ ನಂತರ ಏರ್ಪಡಿಸಲಾಗಿದ್ದ ಭೋಜನಕೂಟಕ್ಕೆ, ಉಡುಪಿಯ ಬುಡ್ಡಾರು ಸುಬ್ರಹ್ಮಣ್ಯ ಆಚಾರ್ಯರು ಉಡುಪಿ ಅಡುಗೆಯನ್ನು ಸಿದ್ಧಪಡಿಸಿದ್ದು, ಇದರ ರುಚಿಯಿಂದಾಗಿ ಎಲ್ಲ ನಾಯಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಿಶೇಷ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದ ಆಚಾರ್ಯರು, ಅಡುಗೆಯನ್ನು ಸಿದ್ಧಪಡಿಸಿದ್ದಲ್ಲದೇ, ಸ್ವತಃ ಮೋದಿ ಮತ್ತು ಇತರ ಗಣ್ಯರಿಗೂ ಕೈಜೋಡಿಸಿದ್ದಾರೆ. ಬಡಿಸುವಲ್ಲೂ ಆಚಾರ್ಯರ ಸಹಾಯಕರಾಗಿ ರಾಜಶೇಖರ್ ತೆರಳಿದ್ದರು. ಜೊತೆ ಪ್ರಹ್ಲಾದ್ ಜೋಶಿ, ಗಡ್ಕರಿ, ಜೆ.ಪಿ.ನಡ್ಡಾ, ಶೋಭಾಕರಂದ್ಲಾಜೆಸೇರಿದಂತೆ ಎಲ್ಲರೂ ಸುಬ್ಬಣ್ಣನ ಅಡುಗೆಯ ಸವಿಯುಂಡು ಪ್ರಶಂಸಿದ್ದಾರೆ. ಇದು ತಮ್ಮ ಜೀವನದ ಶ್ರೇಷ್ಠ ಅಡುಗೆಯಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ಸುಬ್ರಹ್ಮಣ್ಯ ಆಚಾರ್ಯರು ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲೂ ಉಡುಪಿ ಅಡುಗೆಯನ್ನು ಸಿದ್ಧಪಡಿಸಿ ಬಡಿಸಿ ಅತಿಥಿಗಳ ಮನಗೆದ್ದಿದ್ದರು.