LATEST NEWS
ಉಡುಪಿ – ಸಮುದ್ರದ ಅಲೆ ಹೊಡೆತಕ್ಕೆ ನೀರು ಪಾಲಾದ ಮೀನುಗಾರ

ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಸಮುದ್ರದಲ್ಲಿ ಎದ್ದ ಭಾರಿ ಅಲೆಯ ಹೊಡೆತಕ್ಕೆ ಮೀನುಗಾರನೊಬ್ಬ ನೀರುಪಾಲಾದ ಘಟನೆ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ಬಳಿ ನಡೆದಿದೆ. ಮೃತರನ್ನು ಹೆಜಮಾಡಿ ಕೋಡಿ ನಿವಾಸಿ ಪದ್ಮನಾಭ ಸುವರ್ಣ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಣಿಯಲ್ಲಿ ಪದ್ಮನಾಭ ಸುವರ್ಣ ಮತ್ತು ಮೀನುಗಾರ ಧೀರೇಶ್ ಬಂಗೇರ ಗುರುವಾರ ಬೆಳಗ್ಗೆ ಹೆಜಮಾಡಿ ಕೋಡಿಯಿಂದ ಮೀನುಗಾರಿಕೆಗೆ ತೆರಳಿದ್ದರು. ಅವರ ದೋಣಿ ನದೀಮುಖದ ಪ್ರವೇಶ ದ್ವಾರವನ್ನು ತಲುಪುತ್ತಿದ್ದಂತೆ, ಬೃಹತ್ ಅಲೆಯೊಂದು ದೋಣಿಗೆ ಅಪ್ಪಳಿಸಿದೆ ಮತ್ತು ದೋಣಿ ಮಗುಚಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಣಿಯಲ್ಲಿದ್ದ ಮತ್ತೋರ್ವ ಮೀನುಗಾರ ಧೀರೇಶ್ ಬಂಗೇರ ಈಜಿ ದಡಕ್ಕೆ ಬಂದಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
