LATEST NEWS
ನೂತನ ಜಿಲ್ಲಾ ಆಸ್ಪತ್ರೆ ಪೂರ್ಣಗೊಳ್ಳುವ ವರೆಗೆ ಉಡುಪಿ ಜಿಲ್ಲಾ ಆಸ್ಪತ್ರೆ ಬ್ರಹ್ಮಾವರಕ್ಕೆ ಸ್ಥಳಾಂತರ
ಉಡುಪಿ, ನವೆಂಬರ್ 19 : ಪ್ರಸ್ತುತ ಉಡುಪಿಯಲ್ಲಿರುವ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ, ಇತರೆ ಮೂಲಭೂತ ಸೌಕರ್ಯಗಳೊಂದಿಗೆ 115 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗೊಳ್ಳಲು ಈಗಾಗಲೇ ಅನುಮೋದನೆ ದೊರೆತಿದ್ದು, ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ಪೂಣಗೊಳ್ಳುವವರೆಗೆ, ಈಗಿರುವ ಜಿಲ್ಲಾಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬ್ರಹ್ಮಾವರಕ್ಕೆ ಸ್ಥಳಾಂತರಿಸುವ ಕುರಿತಂತೆ , ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ನೂತನ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿಯು 2021 ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ನೂತನ ಕಟ್ಟಡ ಕಾಮಗಾರಿಯ ಸಂದರ್ಭದಲ್ಲಿ ರೋಗಿಗಳನ್ನು ಹಾಗೂ ಸಂಪೂರ್ಣ ಉಪಕರಣಗಳನ್ನು ಸ್ಥಳಾಂತರಿಸುವುದು ಅಗತ್ಯವಿದ್ದು, ಅದಕ್ಕಾಗಿ ಹೊಸ ಕಟ್ಟಡ ಪೂರ್ಣಗೊಳ್ಳುವರೆಗೆ ತಾತ್ಕಾಲಿಕವಾಗಿ ಬ್ರಹ್ಮಾವರಕ್ಕೆ ಸ್ಥಳಾಂತರಿಸುವುದು ಅಗತ್ಯವಿದೆ ಎಂದು ಶಾಸಕ ರಘುಪತಿ ಭಟ್ ಮತ್ತು ಎಲ್ಲಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು, ಈ ಕುರಿತಂತೆ ಬ್ರಹ್ಮಾವರದಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬ್ರಹ್ಮಾವರ ಸಮುದಾಯ ಕೇಂದ್ರ, ಡಿಎಚ್‌ಒ ಕಚೇರಿ, ಪಶು ಆಸ್ಪತ್ರೆ ಹಾಗೂ ಬಿಆರ್ ಶೆಟ್ಟಿ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ವರ್ಗಾಯಿಸುವುದು ಉತ್ತಮ’ ಎಂದು ಅಭಿಪ್ರಾಯಪಟ್ಟರು. ಬ್ರಹ್ಮಾವರ ಸಮುದಾಯ ಕೇಂದ್ರಕ್ಕೆ ಜಿಲ್ಲಾ ಆಸ್ಪತ್ರೆ ಸ್ಥಳಾಂತರವಾದರೆ ಕುಂದಾಪುರ, ಕಾರ್ಕಳ ತಾಲ್ಲೂಕಿನ ರೋಗಿಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ಹಾಗೂ ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್ ಅವರಿಗೆ ಶಾಸಕರು ಸೂಚಿಸಿದರು.
ಸರ್ಜನ್ ಮಧುಸೂಧನ್ ನಾಯಕ್ ಪ್ರತಿಕ್ರಿಯಿಸಿ, ‘ಬ್ರಹ್ಮಾವರ ಸಮುದಾಯ ಕೇಂದ್ರ ತುಂಬಾ ಹಳೆಯ ಕಟ್ಟಡವಾಗಿರುವುದರಿಂದ ಅಲ್ಲಿಗೆ ಸ್ಥಳಾಂತರಿಸುವುದು ಸೂಕ್ತವಲ್ಲ. ಬದಲಿಗೆ ಅದರ ಪಕ್ಕದಲ್ಲಿರುವ ಹೊಸ ಕಟ್ಟಡಗಳನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.