UDUPI
14 ದಿನ ಉಡುಪಿ ಜಿಲ್ಲೆಗೆ ನೋ ಎಂಟ್ರಿ..

ಉಡುಪಿ ಜುಲೈ 16: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಇಂದಿನಿಂದ 14 ದಿನಗಳ ಕಾಲ ಬಂದ್ ಮಾಡಲಾಗಿದೆ. ಜಿಲ್ಲೆಗೆ ಹೊರ ಜಿಲ್ಲೆಯ ವಾಹನಗಳಿಗೆ ಪ್ರವೇಶಕ್ಕೆ ತಡೆ ಒಡ್ಡಲಾಗಿದ್ದು, ಕೇವಲ ಅಗತ್ಯ ವಸ್ತುಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಗಡಿಗಳನ್ನು ಸೀಲ್ ಡೌನ್ ಮಾಡಿದ್ದಾರೆ. ಅನಗತ್ಯವಾಗಿ ಯಾರೂ ಜಿಲ್ಲೆಗೆ ಬರುವಂತಿಲ್ಲ,ಯಾರೂ ಹೊರ ಹೋಗುವಂತಿಲ್ಲ. ಸರಕು ಸಾಗಣೆ, ಅಗತ್ಯ ವಸ್ತುಗಳ ಪೂರೈಕೆ, ತುರ್ತು ಸೇವಾ ವಾಹನಗಳಿಗೆ ಮಾತ್ರ ಅವಕಾಶವಿದೆ.

ನಾಲ್ಕು ಗಡಿಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸುತ್ತಿದ್ದು ಹೊರ ಜಿಲ್ಲೆಯ ವಾಹನಗಳನ್ನ ಹಿಂದಕ್ಕೆ ಕಳುಹಿಸುತ್ತಿರುವ ದೃಶ್ಯಗಳು ಕೂಡ ಈ ಸಂದರ್ಭ ಕಂಡು ಬಂದಿದೆ. ಇನ್ನು ಉಡುಪಿ ಜಿಲ್ಲೆಯ ಕಂಟೈನ್ಮೆಂಟ್ ವಲಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಒಟ್ಟು 14ದಿನಗಳ ಕಾಲ ಉಡುಪಿಯಲ್ಲಿ ಕಟ್ಟುನಿಟ್ಟಿನ ಸೀಲ್ ಡೌನ್ ಜಾರಿಯಲ್ಲಿರಲಿದೆ. ಈಗಾಗಲೇ ಖಾಸಗಿ ಬಸ್ ಗಳ ಸಂಚಾರವನ್ನು ಬಂದ್ ಮಾಡಿರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಿಕ್ಷಾ, ಟ್ಯಾಕ್ಸಿ ಮತ್ತು ಇತರ ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ.