UDUPI
ಹೊರ ಜಿಲ್ಲೆಗಳ ವಲಸೆ ಕಾರ್ಮಿಕರುಗಳ ಮೇಲೆ ದೌರ್ಜನ್ಯಗಳಾಗದಂತೆ ಎಚ್ಚರವಹಿಸಿ :ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ, ಅಕ್ಟೋಬರ್ 21 : ಜಿಲ್ಲೆಗೆ ಉದ್ಯೋಗ ಅರಸಿ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರುಗಳ ಮೇಲೆ ದೌರ್ಜನ್ಯಗಳಾಗದಂತೆ ಎಚ್ಚರವಹಿಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆ ಹಾಗೂ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯವಾಗಿ ಹೊರ ಜಿಲ್ಲೆಗಳಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾರ್ಮಿಕರುಗಳೆ ಉದ್ಯೋಗ ಅರಸಿ ಜಿಲ್ಲೆಗೆ ಬರುತ್ತಿದ್ದಾರೆ. ಅವರುಗಳಿಗೆ ಉದ್ಯೋಗ ನೀಡುವ ಗುತ್ತಿಗೆದಾರರು, ಮಾಲೀಕರು, ಕಾರ್ಮಿಕ ಕಾಯ್ದೆಯಡಿ ಘೋಷಿಸಿರುವ ಕನಿಷ್ಠ ವೇತನ, ಭವಿಷ್ಯ ನಿಧಿ, ಇ.ಎಸ್.ಐ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು. ಅವರುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಗಳಿಗೆ ಕರೆದೊಯ್ಯುವಾಗ ಗೂಡ್ಸ್ ವಾಹನಗಳನ್ನು ಬಳಸಬಾರದು. ಕಾರ್ಮಿಕರಿಗೆ ತಂಗಲು ಅವಕಾಶ ನೀಡಿದ ಸ್ಥಳದಲ್ಲಿ ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸುವುದರೊಂದಿಗೆ ಅವರುಗಳ ಆರೋಗ್ಯ ಸುರಕ್ಷತೆ ಕಾಪಾಡುವಲ್ಲಿ ಕ್ರಮ ವಹಿಸಬೇಕು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಮೇಲೆ ದೌರ್ಜನ್ಯ ಪ್ರಕರಣಗಳು ಜನಸಾಮಾನ್ಯರು ನಡೆಸದಂತೆ ಅರಿವು ಮೂಡಿಸುವುದರ ಜೊತೆಗೆ, ದೌರ್ಜನ್ಯ ಎಸಗಿದ್ದಲ್ಲಿ ಕಾನೂನಿನ ಅಡಿಯಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತವೆ ಎಂಬುದನ್ನು ಸಹ ತಿಳಿಸಬೇಕು ಎಂದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 9 ದೌರ್ಜನ್ಯ ಪ್ರಕರಣಗಳಾಗಿದ್ದು, ಈಗಾಗಲೇ 2 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 5 ಪ್ರಕರಣಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ಜಾರಿಯಲ್ಲಿದ್ದು, 1 ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಗೂ ಇನ್ನೊಂದು ಪ್ರಕರಣದಲ್ಲಿ ಎಸ್.ಸಿ.ಎಸ್.ಟಿ ಕಾಯ್ದೆಯಡಿ ಕೈಬಿಡಲಾಗಿದೆ ಎಂದರು.
ನವೆಂಬರ್ 7 ರಂದು ಭಾರತ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರು ಶಾಲೆಗೆ ಸೇರಿದ ದಿನವಾಗಿದ್ದು, ಈ ದಿನವನ್ನು ಪ್ರತಿಭಾ ಪುರಸ್ಕಾರ ದಿನವೆಂದು ಆಚರಿಸಲಾಗುತ್ತಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಪೌರಕಾರ್ಮಿಕರಾಗಿ ನೇಮಕವಾಗಿ ಸಿಂಧುತ್ವವನ್ನು ನೀಡಲಾದ 104 ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿಯು ನಡೆಯದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಗಳು ಅಗತ್ಯ ಕ್ರಮ ವಹಿಸಬೇಕು. ಇಂತಹ ಪ್ರಕರಣಗಳು ಅಕ್ಷಮ್ಯ ಅಪರಾಧವಾಗಿರುತ್ತದೆ. ಅಧಿಕಾರಿಗಳು ಈ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದರು.
ಸಫಾಯಿ ಕರ್ಮಚಾರಿ ನಿಗಮದಿಂದ ನೀಡುವ ವಿವಿಧ ಯೋಜನೆಗಳ ಸೌಲಭ್ಯವನ್ನು ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಮಾಹಿತಿ ನೀಡಿ, ಯೋಜನೆಯ ಲಾಭ ಪಡೆಯುವಂತೆ ಕ್ರಮವಹಿಸಬೇಕು ಎಂದರು. ಪರಿಸರ ಅಭಿಯಂತರರು ಪ್ರತಿದಿನ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯ ಚಟುವಟಿಕೆಗಳ ನಡೆಸುವ ಕುರಿತು ಸ್ಥಳ ಪರಿಶೀಲನೆ ಮಾಡಬೇಕು. ಪೌರಕಾರ್ಮಿಕರಿಗೆ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು. ಉತ್ತಮ ಗುಣಮಟ್ಟದ ಬೆಳಗ್ಗಿನ ಉಪಾಹಾರದೊಂದಿಗೆ ಮೊಟ್ಟೆಯನ್ನು ಸಹ ನೀಡಬೇಕು ಎಂದರು.