UDUPI
ವಿಶೇಷಚೇತನರ ಬದುಕಿಗೆ ಪೂರಕವಾಗುವ ವ್ಯವಸ್ಥೆ ಕಲ್ಪಿಸಬೇಕು : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ, ಮೇ 17 : ವಿಶೇಷಚೇತನರು ಅಂಗವೈಕಲ್ಯತೆಯನ್ನು ಮರೆತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿದ್ದು, ಅವರ ಬದುಕಿಗೆ ಪೂರಕವಾಗುವ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಇಡೀ ಸಮಾಜ ಅವರ ಜೊತೆಗೂಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್‌ಸಂಸ್ಥೆ ಉಡುಪಿ ಜಿಲ್ಲೆ ಮತ್ತು ಎಪಿಡಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ವಿಶ್ವ ಸುಲಭ ಲಭ್ಯತಾ ಅರಿವು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನವನ್ನು ನಡೆಸಬೇಕು. ಕಟ್ಟಡಗಳು ಅಥವಾ ಕಚೇರಿಗಳಿಗೆ ಭೇಟಿ ನೀಡುವ ವಿಕಲಚೇತನರಿಗೆ ಅಗತ್ಯವಿರುವ ಶೌಚಾಲಯ, ರ‍್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್, ಸೌಲಭ್ಯವನ್ನು ಒದಗಿಸುವ ಮೂಲಕ ಮುಕ್ತವಾಗಿ ಸಂಚಾರ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದರು.
ವಿಶೇಷಚೇತನರು ಎಂದು ಅನುಕಂಪ ತೋರದೇ ಆತ್ಮವಿಶ್ವಾಸದಿಂದ ಮುನ್ನುಗ್ಗಲು ಅವರಗಳಿಗೆ ದಾರಿ ಮಾಡಿಕೊಡಬೇಕು. ರೆಡ್‌ಕ್ರಾಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ವಿಕಲಚೇತನರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಗುರುತಿಸುವ ಮೂಲಕ ಮುಂದಿನ ದಿನಗಳಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಹೆಚ್ಚು ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದರು. ಸರ್ಕಾರವು ವಿಶೇಷ ಚೇತನರ ಕಲ್ಯಾಣಕ್ಕಾಗಿ ನೀಡುವ ಅನುದಾನವನ್ನು ಶೇ 5 ರಷ್ಟು ಹೆಚ್ಚಿಸಿದ್ದು, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಕ್ರಿಯಾಯೋಜನೆ ರೂಪಿಸಿವಾಗ ಅದರಲ್ಲಿ ಶೇ 5 ರಷ್ಟು ಅನುದಾನವನ್ನು ಮೀಸಲಿರಿಸಿ ವಿಕಲ ಚೇತನರ ಕಲ್ಯಾಣಕ್ಕಾಗಿ ಅವರಿಗೆ ಅಗತ್ಯವಿರುವ ವಿವಿಧ ಸವಲತ್ತು ಮತ್ತು ಸಲಕರಣೆಗಳನ್ನು ಒದಗಿಸಲಾಗುವುದು. ವಿಶೇಷ ಚೇತನರು ಇದರ ಪ್ರಯೋಜನೆಯನ್ನು ಪಡೆಯಬೇಕೆಂದರು.