KARNATAKA
ಉಡುಪಿ : ಶೌಚಾಲಯ ವಿಡಿಯೋ ಚಿತ್ರೀಕರಣ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ, ವಿಡಿಯೋ ಮಾಡಿದ್ದು ಸಾಬೀತು..!
ಉಡುಪಿ: ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದ್ದು ವಿಡಿಯೋ ಮಾಡಿದ್ದು ಸಾಬೀತತಾಗಿದೆ.
ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ಚಾರ್ಜ್‌ಶೀಟ್ ಸಲ್ಲಿದ್ದಾರೆ. ಮೂವರು ಆರೋಪಿಗಳು ಶೌಚಾಲಯದಲ್ಲಿ ವಿಡಿಯೋ ಮಾಡಿರುವುದು ತಪ್ಪಾಗಿದೆ ಎಂದು ಕ್ಷಮಾಪನ ಪತ್ರ ಬರೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಆರೋಪಿಗಳು ಬರೆದುಕೊಟ್ಟಿರುವ ಪತ್ರವು ಅವರ ಹಸ್ತಾಕ್ಷರ ದೊಂದಿಗೆ ಹೋಲಿಕೆಯಾಗುವುದಾಗಿ ತಿಳಿಸಿದೆ. ಈ ಮೂಲಕ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.ಒಟ್ಟಾರೆಯಾಗಿ ಆರೋಪಿಗಳ ತಪ್ಪೊಪ್ಪಿಗೆಯ ಕ್ಷಮಾಪನ ಪತ್ರ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಗಳ ಆಧಾರದಲ್ಲಿ ಆರೋಪಿಗಳ ವಿರುದ್ಧ ಕಲಂ 204, 509, 120(ಬಿ) ಸಹಿತ 34, 37 ಐಪಿಸಿ ಹಾಗೂ 66(ಇ) ಐಟಿ ಆ್ಯಕ್ಟ್‌ನಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎರಡು ಸಂಪುಟಗಳಲ್ಲಿ 925 ಪುಟಗಳ ಈ ಚಾರ್ಜ್‌ಶೀಟ್‌ನಲ್ಲಿ 91 ಸಾಕ್ಷಿಗಳನ್ನು ಪರಿಗಣಿಸಲಾಗಿದೆ.
ಸಂತ್ರಸ್ತೆಯ ಹೇಳಿಕೆ :
‘ವಿಡಿಯೋ ಚಿತ್ರೀಕರಣ ವಿಚಾರದ ಕುರಿತು ಕಾಲೇಜಿನಲ್ಲಿ ನಡೆದ ಪ್ರತಿಭಟನೆಯಲ್ಲಿ ತಾನು ಭಾಗವಹಿಸಿಲ್ಲ. ಬಳಿಕ ಆಡಳಿತ ಮಂಡಳಿಯವರು ಪೋಷಕರನ್ನು ಕರೆಸಿ ಮಾತುಕತೆ ನಡೆಸಿದ್ದು, ಆ ವೇಳೆ ನಾನು ಈ ವಿಷಯ ಹೊರಗೆ ಹೋದರೆ ನನ್ನ ಮತ್ತು ಆ ಮೂರು ಜನರ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದ್ದೇನೆ. ಅಲ್ಲದೆ ಆ ಮೂವರು ಹೆಣ್ಣು ಮಕ್ಕಳು ಈ ವಿಚಾರವಾಗಿ ಎಲ್ಲರ ಮುಂದೆ ಕ್ಷಮಾಪಣೆಯನ್ನು ಕೇಳಿದ್ದರು . ಮಾತುಕತೆ ಸಂದರ್ಭ ನನ್ನ ತಾಯಿ, ಈ ವಿಚಾರವನ್ನು ಪ್ರಚಾರ ಮಾಡಬಾರದು, ನನ್ನ ಮಗಳ ಭವಿಷ್ಯ ಹಾಳಾಗುತ್ತದೆ. ಆ ಕಾರಣ ನಾವು ಯಾವುದೇ ರೀತಿಯ ದೂರನ್ನು ನೀಡಲು ಆಗುವುದಿಲ್ಲ ಎಂದು ಪೊಲೀಸರ ಮುಂದೆ ತಿಳಿಸಿರುವುದಾಗಿ ಸಂತ್ರಸ್ತೆ ಹೇಳಿದ್ದಾರೆ. ಒಂದು ವೇಳೆ ಆರೋಪಿಗಳು ಆ ರೀತಿಯ ವಿಡಿಯೋ ಅಥವಾ ಫೋಟೋ ಮಾಡಿದ್ದರೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತ್ರಸ್ತೆ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ನಾವೆಲ್ಲ ಗೆಳತಿಯರಾಗಿದ್ದು, ನಾವು ಹಲವು ಬಾರಿ ಹುಟ್ಟುಹಬ್ಬ ಸೇರಿದಂತೆ ಫ್ರಾಂಕ್ ವಿಡಿಯೋ ಮಾಡಿ, ಎಲ್ಲರೊಂದಿಗೆ ನೋಡಿ ಗಮ್ಮತ್‌ನಲ್ಲಿ ನಗುತ್ತಿದ್ದೆವು. ಅದೇ ರೀತಿ ಅಂದು ವಾಶ್‌ರೂಂನಲ್ಲಿ ವಿಡಿಯೋ ಮಾಡಿದ್ದು, ಬಳಿಕ ಪರಿಶೀಲಿಸಿದಾಗ ವಿಡಿಯೋದಲ್ಲಿ ಆಕೆ ವಾಶ್‌ರೂಂನಲ್ಲಿ ಮೇಲೆ ನೋಡಿ ರುವುದು ಮಾತ್ರ ಚಿತ್ರೀಕರಣವಾಗಿದೆ. ಅದನ್ನು ನಾವು ಮೂವರೇ ನೋಡಿ ಡಿಲೀಟ್ ಮಾಡಿದೆವು. ಬೇರೆ ಯಾರು ಈ ವಿಡಿಯೋ ನೋಡಿಲ್ಲ’ ಎಂದು ಆರೋಪಿ ವಿದ್ಯಾರ್ಥಿನಿಯರು ಹೇಳಿಕೆ ನೀಡಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.