LATEST NEWS
ಉಡುಪಿ – ಶೀಘ್ರದಲ್ಲೇ ಶೇಕಡ 100 ರಷ್ಟು ಕೊರೊನಾ ಲಸಿಕೆ – ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ, ಡಿಸೆಂಬರ್ 5 : ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕಾರ್ಯಕ್ರಮಗಳಿಗೆ ಶ್ರೀಕೃಷ್ಣ ಮಠ ಜಿಲ್ಲಾಡಳಿತಕ್ಕೆ ನೀಡುತ್ತಿರುವ ಬೆಂಬಲ ಹಾಗೂ ಸಹಕಾರದಿಂದ , ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಹಾಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ 94.5% ಪ್ರಥಮ ಡೋಸ್ ಹಾಗೂ 74% ಎರಡನೇ ಡೋಸ್ ಲಸಿಕೆ ನೀಡುವ ಸಾಧನೆ ಆಗಿದ್ದು , ಇಂದು ಜಿಲ್ಲೆಯ ವಲಸಿಗರು ಮತ್ತು ಕೂಲಿ ಕಾರ್ಮಿಕರಿಗಾಗಿ ವಿಶೇಷ ಲಸಿಕಾ ಅಭಿಯಾನ ವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆರಂಭಿಸಿದ್ದು, ಶ್ರೀಕೃಷ್ಣನ ಆಶೀರ್ವಾದದಿಂದ ಶೀಘ್ರದಲ್ಲಿ ಜಿಲ್ಲೆಯಲ್ಲಿ 100% ಲಸಿಕೆ ಗುರಿ ಸಾಧಿಸಲು ಸಾಧ್ಯವಾಗಲಿದ್ದು, ಜಿಲ್ಲೆಯ ಪ್ರತಿಯೊಬ್ಬ ನಾಗರೀಕರು 2 ಡೋಸ್ ಲಸಿಕೆ ಪಡೆಯುವುದರ ಮೂಲಕ ಜಿಲ್ಲೆಯನ್ನು ಕೋವಿಡ್19 ಮುಕ್ತವಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ಮಠದ ವತಿಯಿಂದ ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿರಿಗೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇದ್ದವರಿಗೆ ಉಚಿತ ಆಹಾರ ಒದಗಿಸಿರುವುದಲ್ಲದೇ, ಜಿಲ್ಲಾಡಳಿತಕ್ಕೆ ಸುಸಜ್ಜಿತ ಆಂಬುಲೆನ್ಸ್ ನೀಡುವ ಮೂಲಕ ಶ್ರೀಕೃಷ್ಣ ಮಠ ಜಿಲ್ಲಾಡಳಿತಕ್ಕೆ ಕೋವಿಡ್ ನಿಯಂತ್ರಣದಲ್ಲಿ ಅತ್ಯುತ್ತಮ ಬೆಂಬಲ ನೀಡಿದ್ದು,ಜಿಲ್ಲೆಯ ಕೋವಿಡ್ ಪೀಡಿತರಿಗೆ ಶ್ರೀಕೃಷ್ಣನ ಪ್ರಸಾದ ಹಾಗೂ ಸ್ವಾಮೀಜಿಗಳ ಆಶೀರ್ವಾದ ಒಟ್ಟಿಗೆ ದೊರೆತಿದೆ. ಅಲ್ಲದೇ ಕೋವಿಡ್ ಸಮುಚಿತ ವರ್ತನೆಗಳ ಪಾಲನೆ ಕುರಿತು ಪೂಜ್ಯ ಶ್ರೀಗಳು ನೀಡಿದ ವೀಡಿಯೋ ಸಂದೇಶ , ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಜಿಲ್ಲೆಯ ಪ್ರತಿ ಮನೆ ಮನೆಗಳಿಗೆ ತಲುಪಿದ್ದು, ನಾಗರೀಕರು ಅವುಗಳನ್ನು ಪಾಲನೆ ಮಾಡಿದ್ದು, ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯ ಹೆಚ್ಚಳ ತಡೆಯಲು ಸಾಧ್ಯವಾಗಿದೆ ಎಂದರು.