LATEST NEWS
ಉಡುಪಿಯಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಕ್ಯಾರ್ ಚಂಡಮಾರುತ

ಇಬ್ಬರನ್ನು ಬಲಿ ತೆಗೆದುಕೊಂಡ ಕ್ಯಾರ್ ಚಂಡಮಾರುತ
ಮಂಗಳೂರು ಅಕ್ಟೋಬರ್ 25: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ತತ್ತರಿಸಿ ಹೋಗಿದೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್ ಚಂಡಮಾರುತ ಉಡುಪಿಯಲ್ಲಿ ಇಬ್ಬರ ಬಲಿ ತೆಗೆದುಕೊಂಡಿದೆ.
ಕಡಲ ತೀರ ಪ್ರದೇಶದಲ್ಲಿ ಬೃಹತ್ ಗಾತ್ರದ ಅಲೆಗಳು ನುಗ್ಗುತ್ತಿದ್ದು, ಕಡಲ ತೀರದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಒಂದೆಡೆ ಪರದಾಡುವಂತಾಗಿದ್ದರೆ, ಇನ್ನೊಂದೆಡೆ ಅಲೆಗಳ ಅಬ್ಬರಕ್ಕೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಉಡುಪಿಯಲ್ಲಿ ಮಳೆಗೆ ಮಹಿಳೆ ಬಲಿಯಾಗಿದ್ದಾರೆ. ಕುಂಜಾರುಗಿರಿ ಶಂಖತೀರ್ಥದಲ್ಲಿ ಸುಲೋಚನಾ(42) ಸಾವನ್ನಪ್ಪಿದ್ದಾರೆ. ಕುರ್ಕಾಲು ಗ್ರಾಮದ ಕುಂಜಾರುಗಿರಿ ಬಳಿ ಈ ಘಟನೆ ನಡೆದಿದ್ದು, ಹುಲ್ಲು ಕೊಯ್ಯಲು ಹೋಗಿದ್ದಾಗ ಆಯ ತಪ್ಪಿ ಮಹಿಳೆ ಹಳ್ಳಕ್ಕೆ ಬಿದ್ದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸಾರ್ವಜನಿಕರ ನೆರವಿನಿಂದ ಮಹಿಳೆಯ ಶವ ಪತ್ತೆಹಚ್ಚಲಾಗಿದೆ.

ಉಡುಪಿಯಲ್ಲಿ ಬೀಸುತ್ತಿರುವ ಭಾರೀ ಗಾಳಿ ಮಳೆ ಮತ್ತೊಂದು ಜೀವ ಬಲಿ ಪಡೆದಿದ್ದು. ಮೃತರನ್ನು ರವೀಂದ್ರ ಕುಲಾಲ್(38) ಎಂದು ಗುರುತಿಸಲಾಗಿದೆ. ಕುಕ್ಕೆಹಳ್ಳಿ ಗ್ರಾಮದ ಅಜ್ಜಿಕಟ್ಟೆಯಲ್ಲಿ ಗಾಳಿ ಮಳೆಯಿಂದ ರಕ್ಷಣೆ ಪಡೆಯಲು ಮನೆ ಮಾಡಿನ ಕೆಳಗೆ ರವೀಂದ್ರ ಅವರು ನಿಂತಿದ್ದ ಸಂದರ್ಭ ಮನೆ ಮೇಲೆ ಮಾವಿನ ಮರ ಬಿದ್ದಿದೆ. ಮಾವಿನ ಮರದ ಕೊಂಬೆ ಬಿದ್ದ ಪರಿಣಾಮ ರವೀಂದ್ರ ಕುಲಾಲ್ ಸ್ಥಳದಲ್ಲೇ ಸಾವನಪ್ಪಿದ್ದಾರೆ.