KARNATAKA
ಹಾವೇರಿ ಪ್ರೇಮ ಪ್ರಕರಣಕ್ಕೆ ಬಿಗಿ ಟ್ವಿಸ್ಟ್, ಇಷ್ಟದ ಹುಡುಗಿಯೊಂದಿಗೆ ಮದುವೆ ಮಾಡಿಸುವುದಾಗಿ ಯುವಕನ ಕರೆದು ಕೊಂದು ಕಾರಿನಲ್ಲಿ ಸುಟ್ಟ ಕಿರಾತಕರು..!
ಹಾವೇರಿ: ಹಾವೇರಿ ಪ್ರೇಮ ಪ್ರಕರಣಕ್ಕೆ ಬಿಗಿ ಟ್ವಿಸ್ಟ್, ಸಿಕ್ಕಿದ್ದು ಪ್ರೀತಿಸುತ್ತಿದ್ದ ಯುವಕನನ್ನು ಕೊಂದು ಕಾರಿನಲ್ಲಿ ಸುಟ್ಟ ಘಟನೆ ಹಾವೆರಿಲ್ಲಿ ನಡೆದಿದೆ. ಇಷ್ಟಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ ಯುವಕಕನ್ನು ಶೆಡ್‌ಗೆ ಕರೆಸಿಕೊಂಡು ಹತ್ಯೆ ಮಾಡಿ ಬಳಿಕ ಕಾರು ಸಮೇತ ಸುಟ್ಟು ಹಾಕಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹಾನಗಲ್ ಠಾಣೆ ಪೊಲೀಸರು, ಏಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಶಿವಮೊಗ್ಗದ ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ತೊಗರ್ಸಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ವೀರೇಶ (27)ನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವೀರೇಶ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಪೊಲೀಸರು, ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಹಾನಗಲ್ ಠಾಣೆಗೆ ವರ್ಗಾಯಿಸಿದ್ದರು. ನಂತರ, ಅಕ್ಕಿಆಲೂರಿನ ಯುವತಿಯ ಇಬ್ಬರು ಸಹೋದರರು, ತಂದೆ– ಚಿಕ್ಕಪ್ಪ ಹಾಗೂ ಮೂವರು ಕಾರ್ಮಿಕರನ್ನು ಬಂಧಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ಶಿವಮೊಗ್ಗದ ಗಾಡಿಕೊಪ್ಪದ ವೀರೇಶ, ಚಾಲಕ ವೃತ್ತಿಯಲ್ಲಿದ್ದರು. ಶಿವಮೊಗ್ಗದಲ್ಲಿ ಓದುತ್ತಿದ್ದ ದೂರದ ಸಂಬಂಧಿಯೂ ಆಗಿದ್ದ ಅಕ್ಕಿಆಲೂರಿನ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ವೀರೇಶನ ನಡತೆ ಸರಿ ಇಲ್ಲ ಎಂದು ಯುವತಿ ಅಣ್ಣಂದಿರು, ಪೋಷಕರು ವಿರೋಧ ವ್ಯಕ್ತಪಡಿಸಿದ್ದರು’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ. ‘ಯುವತಿಯನ್ನು ಮದುವೆಯಾಗಲು ತೀರ್ಮಾನಿಸಿದ್ದ ವೀರೇಶ, ಅವರ ಮನೆಗೂ ಹೋಗಿ ಕೇಳಿ ಬಂದಿದ್ದ. ಆದರೆ, ಮದುವೆಗೆ ಮನೆಯವರು ಒಪ್ಪಿರಲಿಲ್ಲ. ಸಿಟ್ಟಾದ ವೀರೇಶ, ಯುವತಿ ಜೊತೆಗಿನ ಚಿತ್ರಗಳನ್ನು ಸಂಬಂಧಿಕರೊಬ್ಬರಿಗೆ ಕಳುಹಿಸಿದ್ದ. ವಿಷಯ ತಿಳಿದ ಯುವತಿಯ ಸಹೋದರರು, ಮದುವೆ ಮಾಡಿಸುವ ನೆಪದಲ್ಲಿ ವೀರೇಶನನ್ನು ಕರೆಸಿಕೊಂಡು ತಾಕೀತು ಮಾಡಲು ಸಂಚು ರೂಪಿಸಿದ್ದರು’ ಎಂಬ ಮಾಹಿತಿಯೂ ಪಟ್ಟಿಯಲ್ಲಿ ಇದೆ.
‘ಮಾರ್ಚ್ 15ರಂದು ಬೆಳಿಗ್ಗೆ ವೀರೇಶಗೆ ಕರೆ ಮಾಡಿದ್ದ ಯುವತಿಯ ಅಣ್ಣಂದಿರು, ‘ತಂಗಿ ಜೊತೆಗಿನ ಫೋಟೊವನ್ನು ಎಲ್ಲರಿಗೂ ಕಳುಹಿಸುತ್ತಿದ್ದಿಯಾ. ಇದರಿಂದ ನಮ್ಮ ಮರ್ಯಾದೆ ಹೋಗುತ್ತಿದೆ. ನೀನು ನಮ್ಮೂರಿಗೆ ಬಾ. ನಿನ್ನ ಜೊತೆ ತಂಗಿಯ ಮದುವೆ ಮಾಡಿಸುತ್ತೇವೆ. ಕರೆದುಕೊಂಡು ಹೋಗು’ ಎಂದಿದ್ದರು. ಅದರಿಂದ ಖುಷಿಯಾಗಿದ್ದ ವೀರೇಶ, ಸ್ನೇಹಿತನ ಇನ್ನೋವಾ ಕಾರು (ಕೆಎ 51 ಎಂಡಿ 3369) ತೆಗೆದುಕೊಂಡು ತಮ್ಮ ಊರಿನಿಂದ ಅಕ್ಕಿಆಲೂರಿನತ್ತ ಹೊರಟಿದ್ದರು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.
‘ವ್ಯಾಪಾರಸ್ಥರಾಗಿದ್ದ ಅಣ್ಣಂದಿರು, ಗೋವಿನ ಜೋಳದ ಮೂಟೆಗಳನ್ನು ಇಳಿಸಬೇಕೆಂದು ಹೇಳಿ ಮೂವರು ಕಾರ್ಮಿಕರನ್ನು ಶೆಡ್‌ಗೆ ಕರೆಸಿಕೊಂಡಿದ್ದರು. ಆದರೆ, ಮೂಟೆಗಳು ಬಂದಿರಲಿಲ್ಲ. ಅನುಮಾನಗೊಂಡು ಕಾರ್ಮಿಕರು ಕೇಳಿದಾಗ, ಸದ್ಯದಲ್ಲೇ ಬರುವುದಾಗಿ ಹೇಳಿ ಸುಮ್ಮನಾಗಿಸಿದ್ದರು.’
‘ಅಕ್ಕಿಆಲೂರಿಗೆ ಬರುತ್ತಿದ್ದ ವೀರೇಶನಿಗೆ ಆರೋಪಿಗಳು ಕರೆ ಮಾಡಿದ್ದರು. ಮಾರ್ಗಮಧ್ಯೆ ಇರುವುದಾಗಿ ವೀರೇಶ ಹೇಳಿದ್ದ. ಆಗ ಆರೋಪಿಯೊಬ್ಬ ಕಾರ್ಮಿಕನ ಜೊತೆ ಬೈಕ್‌ನಲ್ಲಿ ನಾಲ್ಕರ ಕ್ರಾಸ್‌ಗೆ ಹೋಗಿದ್ದ. ಅಲ್ಲಿಯೇ ವೀರೇಶ ಅವರ ಕಾರು ನಿಲ್ಲಿಸಿ, ಅದರಲ್ಲೇ ಹತ್ತಿದ್ದ. ಬಳಿಕ, ಇಬ್ಬರೂ ಕಾರಿನಲ್ಲಿ ಶೆಡ್‌ಗೆ ಬಂದಿದ್ದರು. ಯುವತಿ ವಿಚಾರ ಪ್ರಸ್ತಾಪಿಸಿದ್ದ ಆರೋಪಿಗಳು, ಹಲ್ಲೆ ಮಾಡಿದ್ದರು. ಮಚ್ಚಿನಿಂದ ಹೊಡೆದಿದ್ದರು. ತೀವ್ರ ಗಾಯಗೊಂಡು, ವೀರೇಶ ಮೃತಪಟ್ಟಿದ್ದರು. ಶೆಡ್‌ಗೆ ಬಂದಿದ್ದ ಯುವತಿಯ ತಂದೆ–ಚಿಕ್ಕಪ್ಪ, ರಕ್ತದ ಕಲೆಗಳನ್ನು ತೊಳೆದಿದ್ದರು‘ ಎಂಬ ಅಂಶ ಪಟ್ಟಿಯಲ್ಲಿದೆ.
‘ಶೆಡ್ ಹಾಗೂ ಸುತ್ತಮುತ್ತ ಮೃತದೇಹ ಎಸೆದರೆ, ಪೊಲೀಸರು ತಮ್ಮನ್ನು ಬಂಧಿಸಬಹುದೆಂದು ಆರೋಪಿಗಳು ಅಂದುಕೊಂಡಿದ್ದರು. ಹೀಗಾಗಿ, ವೀರೇಶ ತಂದಿದ್ದ ಇನ್ನೋವಾ ಕಾರಿನಲ್ಲೇ ಮೃತದೇಹ ಇಟ್ಟುಕೊಂಡು ಆರೋಪಿಗಳು ಶಿರಾಳಕೊಪ್ಪದತ್ತ ಹೊರಟಿದ್ದರು. ಮಾರ್ಗಮಧ್ಯೆ ಬಂಕ್‌ವೊಂದರಲ್ಲಿ 5 ಲೀಟರ್ ಪೆಟ್ರೋಲ್ ಖರೀದಿಸಿದ್ದರು. ಮಾರ್ಚ್ 16ರಂದು ನಸುಕಿನಲ್ಲಿ ತೊಗರ್ಸಿ ಗ್ರಾಮ ಬಳಿಯ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬೆಂಕಿ ಹಚ್ಚಿ ಮೃತದೇಹ ಸುಟ್ಟಿದ್ದರು’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.