LATEST NEWS
ಮುಳ್ಳು ಹಂದಿ ಹಿಡಿಯಲು ಹೋಗಿ ಸುರಂಗದೊಳಗೆ ತೆರಳಿದಾತ ಮೃತ್ಯು
ಮುಳ್ಳು ಹಂದಿ ಹಿಡಿಯಲು ಹೋಗಿ ಸುರಂಗದೊಳಗೆ ತೆರಳಿದಾತ ಮೃತ್ಯು
ಉಪ್ಪಳ ಡಿಸೆಂಬರ್ 1: ಮುಳ್ಳು ಹಂದಿ ಹಿಡಿಯಲು ಸುರಂಗದೊಳಗೆ ತೆರಳಿದ್ದ ವ್ಯಕ್ತಿಯೋರ್ವ ಅಲ್ಲೇ ಸಿಲುಕಿ ಮೃತಪಟ್ಟಿರುವ ಘಟನೆ ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಬಾಳಿಗೆಯಲ್ಲಿ ನಡೆದಿದೆ.
ನಾರಾಯಣ ನಾಯ್ಕ ಸುರಂಗದೊಳಗೆ ಸಿಲುಕಿಕೊಂಡು ಮೃತಪಟ್ಟ ದುರ್ದೈವಿ. ನವೆಂಬರ್ 29 ರ ಗುರುವಾರ ಸಂಜೆ ನಾರಾಯಣ ನಾಯ್ಕ, ನಾಲ್ಕು ಮಂದಿ ಸ್ನೇಹಿತರ ಜೊತೆ ಮುಳ್ಳು ಹಂದಿ ಬೇಟೆಗೆಂದು ಸುರಂಗವನ್ನು ಪ್ರವೇಶಿಸಿದ್ದಾರೆ. ಕಿರಿದಾದ ಸುರಂಗದೊಳಕ್ಕೆ ತೆರಳಿ ಒಂದು ಮುಳ್ಳುಹಂದಿಯನ್ನು ಹಿಡಿದು ತಂದಿದ್ದರು. ಮತ್ತೊಂದು ಮುಳ್ಳುಹಂದಿ ಹಿಡಿಯಲು ಸೊಂಟಕ್ಕೆ ಹಗ್ಗ ಕಟ್ಟಿ ತೆರಳಿದ್ದು, ಹೊರಬರಲಾಗದಿದ್ದರೆ ಸೂಚನೆ ನೀಡುತ್ತೇನೆ, ನಂತರ ಹಗ್ಗದ ಮೂಲಕ ನನ್ನನ್ನು ಎಳೆಯಿರಿ ಎಂದು ಹೇಳಿದ್ದರು ಎನ್ನಲಾಗಿದೆ.
ಕಾಲಿಗೆ ಹಗ್ಗ ಕಟ್ಟಿ ಒಳಗೆ ಹೊಕ್ಕ ನಾರಾಯಣ ನಾಯ್ಕ ಸುರಂಗ ಒಳ ಹೊಕ್ಕುತ್ತಿದ್ದಂತೆಯೇ ಮಣ್ಣು ಕುಸಿದು ಗುಹೆಯೊಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಸುರಂಗದೊಳಗೆ ಸುಮಾರು 4೦ ಮೀಟರ್ ದೂರದಲ್ಲಿ ನಾರಾಯಣ ನಾಯ್ಕ್ ಸಿಲುಕಿ ಕೊಂಡಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ರಾತ್ರಿ ಸುಮಾರು 8.30ರಿಂದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಆಕ್ಸಿಜನ್ ಸಿಲಿಂಡರ್ ಬಳಸಿ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರು. ಸುರಂಗದೊಳಗೆ ತೇವಾಂಶ ಭರಿತ ಮಣ್ಣು ಕುಸಿದು ಬಿದ್ದ ಪರಿಣಾಮ ರಮೇಶ ಅವರನ್ನು ಹೊರತರುವ ಶ್ರಮ ವಿಫಲವಾಗಿತ್ತು. ಸುರಂಗ ಕೇವಲ 1.20 ಮೀ. ಅಗಲವಿದ್ದು, ಏಕಕಾಲದಲ್ಲಿ ಒಬ್ಬರು ಮಾತ್ರ ತೆರಳುವಷ್ಟೇ ಕಿರಿದಾಗಿರುವುದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು.
ಶುಕ್ರವಾರ ಮುಂಜಾನೆ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ಸಿಬ್ಬಂದಿ ಸುರಂಗ ನಿರ್ಮಾಣ ಅನುಭವವಿರುವ ಕಾರ್ಮಿಕರ ಸಹಾಯದಿಂದ ಸುರಂಗದ ಒಳಗಡೆ ಕುಸಿದು ಬಿದ್ದಿರುವ ಮಣ್ಣನ್ನು ಹೊರಸಾಗಿಸಿದರು. ಸಾಯಂಕಾಲ 4.30ರ ಸುಮಾರಿಗೆ ನಾರಾಯಣ ನಾಯ್ಕ್ ಅವರ ಮೃತದೇಹವನ್ನು ಹೊರತೆಗೆಯಲಾಯಿತು.
ನಾರಾಯಣ ನಾಯ್ಕ ವೃತ್ತಿಯಲ್ಲಿ ಅಡಿಕೆ ಕೊಯ್ಯುವ ವೃತ್ತಿಯಲ್ಲಿದ್ದು ಕೆಲಸ ಮುಗಿಸಿ ಮುಳ್ಳು ಹಂದಿ ಬೇಟೆಗೆ ತೆರಳಿದ್ದರು.