BANTWAL
ಏಳು ಸುರಂಗ ಕೊರೆದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮಶ್ರೀ ಪ್ರಶಸ್ತಿ

ಮಂಗಳೂರು : ಕೇಂದ್ರ ಸರಕಾರ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀಗೆ ಬಾಜನರಾಗಿದ್ದಾರೆ.
ಗಣರಾಜ್ಯೋತ್ಸವ ಹಿನ್ನಲೆ ಇಂದು ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಪ್ರಕಟಿಸಿದ್ದು,ಕರ್ನಾಟಕಕ್ಕೆ ಈ ಬಾರಿ 5 ಪದ್ಮಶ್ರೀ ಪ್ರಶಸ್ತಿ ದೊರೆತಿದ್ದು, ಅದರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪ್ರಗತಿ ಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿದೆ.
ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರು ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ, ಪ್ರಗತಿಪರ ಕೃಷಿಕ.

ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಭಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಟ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಮಾಹಾಲಿಂಗ ನಾಯ್ಕ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಒನ್ ಮ್ಯಾನ್ ಆರ್ಮಿ.