FILM
ಯಾರು ಕಟಪಾಡಿ ಕಟ್ಟಪ್ಪ ? ನಾಳೆ ಸಿಗಲಿದೆ ಉತ್ತರ

ಯಾರು ಕಟಪಾಡಿ ಕಟ್ಟಪ್ಪ ? ನಾಳೆ ಸಿಗಲಿದೆ ಉತ್ತರ
ಮಂಗಳೂರು ಮಾರ್ಚ್ 28: ತುಳು ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಯಾರು ಕಟಪಾಡಿ ಕಟ್ಟಪ್ಪ ? ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ತುಳು ಚಿತ್ರ ಇದಾಗಿದ್ದು, ನಾಳೆ ಕಟಪಾಡಿ ಕಟ್ಟಪ್ಪ ಭರ್ಜರಿಯಾಗಿ ತೆರೆ ಕಾಣಲಿದೆ.
ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಭಾರೀ ಸೆನ್ಸೇಷನ್ ಸೃಷ್ಠಿಸಿರುವ ಕಟಪಾಡಿ ಕಟ್ಟಪ್ಪ ನಾಳೆಯಿಂದ ತುಳು ಸಿನಿಮಾ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ.

ಇದೇ ಮೊದಲ ಬಾರಿಗೆ ದೇಶ ವಿದೇಶ ಸೇರಿದಂತೆ ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಮೂಲಕ ತುಳು ಚಿತ್ರ ರಂಗದ ಇತಿಹಾಸದಲ್ಲೇ ತುಳು ಚಿತ್ರ ವೊಂದು ಇಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ದಾಖಲೆಯೊಂದು ನಿರ್ಮಾಣವಾಗಲಿದೆ.
ಬ್ರಹ್ಮಾ ವರ್ ಮೂವೀಸ್ ಲಾಂಛನದಲ್ಲಿ ಮೂಡಿಬಂದಿರುವ `ಕಟಪಾಡಿ ಕಟ್ಟಪ್ಪ’ ತುಳು ಚಿತ್ರದ ನಿರ್ಮಾಪಕ ರಾಜೇಶ್ ಬ್ರಹ್ಮಾವರ್. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ.
ಛಾಯಾಗ್ರಾಹಕರಾಗಿ ರುದ್ರಮುನಿ ಅವರು ಕೈಚಳಕ ತೋರಿಸಿದ್ದರೆ , ಚಿತ್ರಕ್ಕೆ ಪ್ರಕಾಶ್ ಸಂಗೀತವಿದೆ. ಇನ್ನು ಚಿತ್ರದಲ್ಲಿ ನಾಯಕರಾಗಿ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದು, ಚರೀಶ್ಮಾ ಸಾಲ್ಯಾನ್ ಜೋಡಿಯಾಗಿ ಅಭಿನಯಿಸಿದ್ದಾರೆ. ಇವರಲ್ಲದೆ ಯಜ್ಞೇಶ್ವರ್ ಬರ್ಕೆ, ವಿಜಯ್ ಕುಮಾರ್ ಕೊಡಿಯಾಲ್‍ಬೈಲ್, ಪಮ್ಮಿ ಕೊಡಿಯಾಲ್‍ಬೈಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಹಿತ ಇನ್ನು ಹಲವು ಕಲಾವಿದ ದಿಗ್ಗಜರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ಬಹಳ ಸಮಯದಿಂದ ಚಿತ್ರಕ್ಕಾಗಿ ಕಾದುಕುಳಿತಿದ್ದ ಪ್ರೇಕ್ಷಕರಿಗೆ ನಾಳೆ ಕಟಪಾಡಿ ಕಟ್ಟಪ್ಪನ ದರ್ಶನವಾಗಲಿದೆ.