DAKSHINA KANNADA
ತುಳು ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತರ ಆಯ್ಕೆ
ತುಳು ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತರ ಆಯ್ಕೆ
ಮಂಗಳೂರು ಮಾರ್ಚ್ 23: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 3 ಮಂದಿ ಹಿರಿಯರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಡಾ. ಎನ್. ನಾರಾಯಣ ಶೆಟ್ಟಿ, ಜಾನಪದ ಕ್ಷೇತ್ರದಲ್ಲಿ ಮಂಜನಾಡಿಯ ಸೇಸಪ್ಪ ಪಂಬದ, ಸಾಹಿತ್ಯ ಕ್ಷೇತ್ರದಲ್ಲಿ ಎಚ್. ಶಕುಂತಳಾ ಭಟ್ ಅವರನ್ನು ಆಯಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಜೀವಮಾನದ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ 2017ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಪ್ರಶಸ್ತಿಗಾಗಿ 3 ವಿಭಾಗಗಳ ತಲಾ ಒಂದು ಪುಸ್ತಕವನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗಿದೆ. ಅಧ್ಯಯನವಿಭಾಗದಲ್ಲಿ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ಯ ‘ತುಳುನಾಡಿನ ಜನಪದ ಪ್ರದರ್ಶನ ಕಲೆಗಳು’ ಕವನ ಸಂಕಲನ ವಿಭಾಗದಲ್ಲಿ ರೂಪಕಲಾ ಆಳ್ವರವರ ‘ಪಡೆಪ್ಪಿರೆ’, ಹಾಗೂ ಕಥಾ ಸಂಕಲನ ವಿಭಾಗದಲ್ಲಿ ಶಿಮಂತೂರು ಚಂದ್ರಹಾಸ ಸುವರ್ಣ ‘ಗಗ್ಗರ’ ಕೃತಿಯನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
2017ನೇ ಸಾಲಿನ ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಶಸ್ತಿ ಪತ್ರ, ಸ್ಮರಣೆಕೆ ಹಾಗೂ ಪುಸ್ತಕ ಬಹುಮಾನಕ್ಕೆ ರೂ.25,000/- ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 7 ರಂದು ತುಳುಭವನದ ‘ಸಿರಿಚಾವಡಿ’ ಯಲ್ಲಿ ಜರಗಲಿದೆ.