BANTWAL
ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಸಂಚಾರ ಅಸ್ತವ್ಯಸ್ತ
ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಸಂಚಾರ ಅಸ್ತವ್ಯಸ್ತ
ಬಂಟ್ವಾಳ ಜೂನ್ 26:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮದ್ಯಾಹ್ನದಿಂದ ಸುರಿಯುತ್ತಿರುವ ಮಳೆಗೆ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾದ ಘಟನೆ ಬಂಟ್ವಾಳ ಬಿ.ಕಸ್ಬಾ ಗ್ರಾಮದ ಮಂಡಾಡಿ ಎಂಬಲ್ಲಿ ನಡೆದಿದೆ.
ಬಿ ಸಿ ರೋಡ್ ಮೂಡಬಿದ್ರೆ ರಸ್ತೆಯ ಬಿ.ಕಸ್ಬಾ ಗ್ರಾಮದ ಮಂಡಾಡಿ ಎಸ್.ವಿ.ಎಸ್.ಕಾಲೇಜು ಬಳಿ ಹಳೆಯ ಬೃಹತ್ ಗಾತ್ರದ ಮರವೊಂದು ರಸ್ತೆ ಗೆ ಉರುಳಿ ಬಿದ್ದಿದೆ. ಬೃಹತ್ ಗಾತ್ರದ ಹಳೆಯ ಮರ ಸಮೀಪದಲ್ಲೇ ಇದ್ದ ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬಕ್ಕೆ ಹಾನಿಯುಂಟಾಗಿದೆ. ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಹಿನ್ನಲೆಯಲ್ಲಿ ಈ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಬೃಹತ್ ಮರ ಬೀಳುವ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಸಂಚಾರವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಈ ಘಟನೆಯಿಂದ ಮೂಡಬಿದ್ರೆ, ಕುಪ್ಪೆಪದವು ಕಡೆಗೆ ತೆರಳುವ ವಾಹನ ಸವಾರರಿಗೆ ತೊಂದರೆ ಯಾಗಿದ್ದು , ಬದಲಿ ರಸ್ತೆಯಾಗಿ ಸಂಚಾರ ಮಾಡಲಾಗುತ್ತಿದೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಮಂಜುನಾಥ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿದ್ದಾರೆ, ಸಾರ್ವಜನಿಕರು ಮರ ತೆರವಿಗೆ ಪ್ರಯತ್ನ ನಡೆಸುತ್ತಿದ್ದಾರೆ.