LATEST NEWS
ದುಧ್‌ಸಾಗರ್ ಬಳಿ ಹಳಿ ತಪ್ಪಿದ ಮಂಗಳೂರು-ಮುಂಬೈ ವಿಶೇಷ ರೈಲು

ಪಣಜಿ ಜುಲೈ 23: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಅಪಾರ ಹಾನಿ ಮಾಡಿದ್ದು, ಸೌತ್ ವೆಸ್ಟರ್ನ್ ರೈಲ್ವೆಯ ದುಧ್‌ಸಾಗರ್ ಮತ್ತು ಸೋನಾಲಿಮ್ ನಡುವೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಎರಡು ಭೂಕುಸಿತ ಸಂಭವಿಸಿದೆ.
ಗೋವಾ ಗಡಿ ಭಾಗದಲ್ಲಿ ಕರ್ನಾಟಕದ ಸರಹದ್ದಿನ ಸೋನಾವಳಿಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಮಾರ್ಗದಲ್ಲಿ ಗುಡ್ಡಕುಸಿತವುಂಟಾದ ಹಿನ್ನೆಲೆಯಲ್ಲಿ ಮುಂಬಯಿ ತೆರಳುವ ಮಂಗಳೂರು-ಮುಂಬಯಿ ಸ್ಪೇ ಶಲ್ ಟ್ರೇ ನ್ ಎಂಜಿನ್ ಮತ್ತು ಒಂದು ಭೋಗಿ ಹಳಿ ತಪ್ಪಿದೆ.
ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಎಲ್ಲಾ 345 ಪ್ರಯಾಣಿಕರನ್ನು ಮಡ್ಗಾಂವ್‌ಗೆ ವಾಪಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಕರಾವಳಿ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಗೋವಾದಲ್ಲಿ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಅನೇಕ ರೈಲುಗಳನ್ನು ಮಡ್ಗೊವನ್-ಲೋಂಡಾ-ಮಿರಾಜ್ ಮೂಲಕ ಸಂಚರಿಸುತ್ತಿವೆ. ಘಟನೆ ನಡೆದ ಕೂಡಲೇ, ಕ್ಯಾಸಲ್ ರಾಕ್ ಮತ್ತು ವಾಸ್ಕೋ ಡಾ ಗಾಮಾದ ಅಪಘಾತ ಪರಿಹಾರ ರೈಲು(ಎಆರ್‌ಟಿ) ಸ್ಥಳಕ್ಕೆ ಧಾವಿಸಿ ಪುನಃಸ್ಥಾಪನೆ ಕ್ರಮಗಳನ್ನು ಕೈಗೊಂಡಿದೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಸೇರಿದಂತೆ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಈ ಮಧ್ಯೆ, ದುಧ್‌ಸಾಗರ್ ಮೂಲಕ ಮಡ್ಗಾಂವ್‌ಗೆ ತೆರಳುತ್ತಿದ್ದ ಹಜರತ್ ನಿಜಾಮುದ್ದೀನ್-ವಾಸ್ಕೋ ಡಾ ಗಾಮಾ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸಿ ಮತ್ತೆ ಲೋಂಡಾಗೆ ವಾಪಸ್ ಕಳುಹಿಸಲಾಯಿತು. ರೈಲಿನಲ್ಲಿ 887 ಪ್ರಯಾಣಿಕರು ಇದ್ದರು.