DAKSHINA KANNADA
ಟ್ರಾಫಿಕ್ ಪೊಲೀಸರ ಎಡವಟ್ಟು: ಕಾರಿನಲ್ಲಿ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ…!
ಮಂಗಳೂರು, ಡಿಸೆಂಬರ್ 30: ಕಾರಿನಲ್ಲಿ ಸಹಪ್ರಯಾಣಿಕ ಹೆಲ್ಮೆಟ್ ಹಾಕಿಲ್ಲವೆಂದು ನಗರದ ಟ್ರಾಫಿಕ್ ಪೊಲೀಸರು ನೊಟೀಸ್ ನೀಡಿರುವ ಘಟನೆ ನಡೆದಿದೆ. ಕಾರಿನಲ್ಲಿ ಕುಳಿತ ಸಹಪ್ರಯಾಣಿಕನೂ ಹೆಲ್ಮೆಟ್ ಹಾಕಬೇಕೇ..? ಎನ್ನುವ ಪ್ರಶ್ನೆ ಮಂಗಳೂರಿನ ಜನತೆಗೆ ಕಾಡಿದೆ.
ಮಂಗಳೂರು ನಗರ ಸಂಚಾರಿ ಪೊಲೀಸರು ಕಾರಿನಲ್ಲಿ ಸಂಚರಿಸಿದ ಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು 500 ರೂಪಾಯಿಗಳ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ನವೆಂಬರ್ 29ರಂದು ಮಂಗಳಾದೇವಿಯಲ್ಲಿ ನಡೆದ ಟ್ರಾಫಿಕ್ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ನೋಟಿಸ್ ಜಾರಿಯಾಗಿದ್ದು, ಡಿ.22ರಂದು ಚಾಲಕನ ಕೈಸೇರಿದೆ.
ನೋಟಿಸ್‌ನಲ್ಲಿ ಎಡವಟ್ಟಾಗಿ ಬೈಕ್ ಎಂಬುದರ ಬದಲು “ಕಾರು’ ಎಂದು ನಮೂದಿಸಲಾಗಿದ್ದು, ಉಲ್ಲಂಘನೆ ರೀತಿ ಕಾಲಂನಲ್ಲಿ “ಸಹಸವಾರ ಹೆಲ್ಮೆಟ್ ಧರಿಸಿಲ್ಲ’ ಎಂದಿದೆ. ನೋಟಿಸ್‌ನಲ್ಲಿ ಉಲ್ಲಂಘನೆ ನಡೆದ ಸ್ಥಳದ ಚಿತ್ರವಿದೆ. ಅದರಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಸಹ ಸವಾರ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವುದು ಕಾಣಿಸುತ್ತಿದ್ದು, ಸ್ವಲ್ಪ ದೂರದಲ್ಲಿ ಕಾರು ಕೂಡ ಇದೆ.
ಮಂಗಳೂರು ನಗರ ಸಂಚಾರ ಪೊಲೀಸ್ ಆಟೋಮೇಶನ್ ಸೆಂಟರ್‌ನಿಂದ ನೋಟಿಸ್ ಕಳುಹಿಸುವ ಸಂದರ್ಭ ದ್ವಿಚಕ್ರ ವಾಹನ ಸವಾರನಿಗೆ ನೋಟಿಸ್ ಕಳುಹಿಸುವ ಬದಲು ಕಾರು ಚಾಲಕನ ವಿಳಾಸಕ್ಕೆ ಕಳುಹಿಸಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪೊಲೀಸರು ಮಾಡಿರುವ ಎಡವಟ್ಟು ಮಾತ್ರ ನಗಪಾಟಲಿಗೆ ಈಡಾಗಿದೆ.