DAKSHINA KANNADA
ಕ್ಷೇತ್ರ ಗೆಜ್ಜೆಗಿರಿಯ ಹೆಸರು ದುರ್ಬಳಕೆ ಆರೋಪ – ದೂರು ದಾಖಲು
ಪುತ್ತೂರು ಜುಲೈ 23: ಶ್ರೀಕ್ಷೇತ್ರ ಗೆಜ್ಜೆಗಿರಿ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಎರಡು ಕಂಪೆನಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಯಿ ಬೈದೇತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘಿಸಿ ಹಾಗೂ ಕ್ಷೇತ್ರದ ಹೆಸರು ದುರುಪಯೋಗಪಡಿಸಿಕೊಂಡು ಅಗರಬತ್ತಿ ತಯಾರಿಸಲಾಗುತ್ತಿದೆ ಎಂದು ಕ್ಷೇತ್ರಾಡಳಿತ ಸಮಿತಿಯು ಪುತ್ತೂರು ಉಪವಿಭಾಗ ಡಿವೈಎಸ್ಪಿಗೆ ದೂರು ಸಲ್ಲಿಸಿದೆ. ಶ್ರೀ ಕ್ಷೇತ್ರ ಗೆಜ್ಜೆಗಿರಿ ಭಾರತ ಸರಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಯಲ್ಲಿ ಗೆಜ್ಜೆಗಿರಿ ಎಂಬ ಟ್ರೇಡ್ ಮಾರ್ಕ್ ಅನ್ನು ಕ್ಲಾಸ್ 3 ಅಡಿಯಲ್ಲಿ ಅಗರಬತ್ತಿ ಉತ್ಪನ್ನ ಹೊಂದಿದೆ. ಈ ಅಧಿಕೃತ ನೋಂದಾವಣೆ ಟ್ರೇಡ್ ಮಾರ್ಕ್ ಶ್ರೀ ಕ್ಷೇತ್ರ ಹೊಂದಿದ್ದು ಗೆಜ್ಜೆಗಿರಿ ಎಂಬ ಮಾರ್ಕ್ ಮೇಲೆ ಬೌದ್ಧಿಕ ಆಸ್ತಿ ಹಕ್ಕಿನ ಕಾನೂನು ಬದ್ಧ ಅಧಿಕಾರ ಹೊಂದಿರುವಾಗ ಗಂಗಗೂಡನಹಳ್ಳಿಯ ಮಿಸ್ಬಾ ಪ್ರಾಗ್ರನೆನ್ಸ್ ಗೆಜ್ಜೆಗಿರಿ ಹೆಸರಿನಲ್ಲಿ ಅಗರಬತ್ತಿ ಉತ್ಪಾದಿಸಿ ದಕ್ಷಿಣ ಕನ್ನಡದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದರ ಜತೆಗೆ ಆರೋಪಿತ ಕಂಪೆನಿಯು ತನ್ನ ಉತ್ಪನ್ನದಲ್ಲಿ ಶ್ರೀ ಕ್ಷೇತ್ರದ ಫೋಟೋ ಅನ್ನು ನಮೂದಿಸಿ ದುರುಪಯೋಗಪಡಿಸಿಕೊಂಡಿದೆ.
ಇದೇ ರೀತಿ ಉಪ್ಪಿನಂಗಡಿಯ ಶುಕ್ರಿಯಾ ಟ್ರೇಡರ್ಸ್‌ನ ಮಾಲಕ ಶುಕೂರ್ ಕೂಡ ಗೆಜ್ಜೆಗಿರಿ ಹೆಸರಿನ ಅಗರಬತ್ತಿ ಮಾರಾಟ ಮಾಡುತ್ತಿದ್ದು, ಶ್ರೀ ಕ್ಷೇತ್ರದ ಹೆಸರನ್ನು, ಫೋಟೋವನ್ನು ಉತ್ಪನ್ನಕ್ಕೆ ಉಪಯೋಗಿಸುತ್ತಿರುವುದು ಕಂಡುಬಂದಿದೆ. ಉತ್ಪನ್ನಗಳನ್ನು ಮುಟ್ಟು ಗೋಲು ಹಾಕಿ ಕ್ರಮ ಕೈಗೊಳ್ಳುವಂತೆ ಕ್ಷೇತ್ರಾಡಳಿತ ಸಮಿತಿ ಪರವಾಗಿ ಉಪಾಧ್ಯಕ್ಷ ರವಿ ಪೂಜಾರಿ ದೂರು ಸಲ್ಲಿಸಿದ್ದಾರೆ.