KARNATAKA
ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಚಿಕ್ಕಮಗಳೂರು, ಜೂನ್ 22: ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನ ಭುಜಕ್ಕೆ ಪ್ರವಾಸಿಗರು ತೆರಳದಂತೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಭಾರೀ ಗಾಳಿ, ಮಳೆ ಮಂಜು ಹಾಗೂ ಜಾರಿಕೆಯ ನಡುವೆಯೂ ಎತ್ತಿನ ಭುಜದ ಕಿರಿದಾದ ಪ್ರದೇಶದಲ್ಲಿ ಪ್ರವಾಸಿಗರು ಟ್ರಕ್ಕಿಂಗ್ ಹೋಗುತ್ತಿದ್ದಾರೆ. ಇದರಿಂದ ಏನಾದರೂ ಅನಾಹುತಗಳು ಸಂಭವಿಸಿದರೆ ಎಂಬ ಮುನ್ನೆಚ್ಚರಿಕೆಯಿಂದ ಟ್ರಕ್ಕಿಂಗ್ ಹೋಗುವ ಮರ್ಗದಲ್ಲಿ ಪ್ರವಾಸಿಗರ ಸುರಕ್ಷತಾ ಕಾಮಗಾರಿಗೆ ಇಲಾಖೆ ಮುಂದಾಗಿದೆ. ಕಾಮಗಾರಿ ಅನುಷ್ಠಾನಗೊಳ್ಳಲಿರುವ ಕಾರಣ ಎತ್ತಿನ ಭುಜಕ್ಕೆ ಮುಂದಿನ ಆದೇಶದವರೆಗೂ ಅರಣ್ಯ ಇಲಾಖೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.
ಜನರ ಸುರಕ್ಷತೆಗಾಗಿ ಕೆಲವು ಪ್ರವಾಸಿ ತಾಣಗಳಿಗೆ ಆನ್ಲೈನ್ ಟಿಕೆಟ್ ಮೂಲಕ ಪ್ರವಾಸಿಗರು ಹೋಗಬೇಕೆಂಬ ನಿಯಮವನ್ನು ಸರ್ಕಾರ ಜಾರಿ ಮಾಡಿದೆ. ಮಾಡಿದೆ. ಆದರೂ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಕಂಡು ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆ ನೀಡಿದೆ. ಇದರಿಂದ ಅರಣ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಈ ನಿರ್ಬಂಧ ವಿಧಿಸಿದೆ.
ಮಲೆನಾಡಲ್ಲಿ ಮಳೆಗೆ ಜಿಲ್ಲೆಯ ಪ್ರವಾಸಿ ತಾಣಗಳು ತನ್ನ ನೈಜ ಸೊಬಗನ್ನ ಅನಾವರಣಗೊಳಿಸಿವೆ. ಅದರಂತೆ ಎತ್ತಿನಭುಜ ತಾಣ ಸಹ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಜೊತೆಗೆ, ಪ್ರವಾಸಿಗರಿಗೆ ಚಾರಣಕ್ಕೆ ಹೋಗಲು ಕೂಡ ಈ ಪ್ರದೇಶ ನೆಚ್ಚಿನದ್ದಾಗಿದೆ. ಕಳೆದ ಶನಿವಾರದಿಂದ ಸೋಮವಾರದವರೆಗೆ ಮೂರು ದಿನದಲ್ಲಿ 20,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.