Connect with us

UDUPI

ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಅಗತ್ಯ

ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಅಗತ್ಯ

ಉಡುಪಿ ಜನವರಿ 27: ಮಾಲಿನ್ಯ ನಿಯಂತ್ರಣಕ್ಕೆ ಕಾನೂನಿನ ಮೂಲಕ ಕಠಿಣ ಕ್ರಮವನ್ನು ಕೈಗೊಳ್ಳುವುದು ಇಂದಿನ ಅಗತ್ಯ ಎಂದು ಉಡುಪಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಟಿ. ವೆಂಕಟೇಶ್ ನಾಯ್ಕ್ ಹೇಳಿದರು.

ಅವರು ಇಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿ ಇವರ ವತಿಯಿಂದ ಮಣಿಪಾಲ ರಜತಾದ್ರಿಯ ವಾಜಪೇಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ಹಾಗೂ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಮಾಲಿನ್ಯ ನಿಯಂತ್ರಣ ಮಂಡಳಿಗಳು ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದು, ಮಾಲಿನ್ಯ ಚಟುವಟಿಕೆಗಳಲ್ಲಿ ತೊಡಗಿರುವ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ನ್ಯಾಯಾಧೀಶರು ವಿವರಿಸಿದರು.

ಮನುಷ್ಯನ ದುರಾಸೆಯಿಂದ ಪ್ರಕೃತಿ ಬರಿದಾಗುತ್ತಿದ್ದು, ಜನಸಂಖ್ಯಾ ಸ್ಪೋಟ ಹಾಗೂ ಯಾಂತ್ರಿಕ ಅಭಿವೃದ್ಧಿಯಿಂದ ನಮ್ಮ ಸಂಪನ್ಮೂಲ ಬರಿದಾಗುತ್ತಿದೆ ಮತ್ತು ಮಾಲಿನ್ಯಗೊಳ್ಳುತ್ತಿದೆ. ಪರಿಸರದಲ್ಲಿ ಜೀವಿಸಲು ಅಸಾಧ್ಯವಾಗುವಂತೆ, ಎಲ್ಲಾ ಹಾನಿಕಾರವನ್ನು ಸೇರಿಸುವುದರಿಂದ ಪರಿಸರ ಮಲಿನ್ಯಗೊಳ್ಳುತ್ತಿದೆ. ಪರಿಸರ ಮಾಲಿನ್ಯದಿಂದಾಗಿ ಭೂ ಸವಕಳಿ, ಬರಗಾಲ ಹಾಗೂ ಇತ್ತೀಚಿನ ದಿನಗಳಲ್ಲಿ ಹವಮಾನ ಬದಲಾವಣೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಸರಿಯಾದ ಮಳೆ ಬೀಳುತ್ತಿಲ್ಲ, ಚಳಿಗಾಲದಲ್ಲಿ ಬಿಸಿ ಏರುತ್ತಿದೆ ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಜಿಲ್ಲೆಯಲ್ಲಿ ಶಾಲೆಗಳು ತಮ್ಮ ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡು ಪರಿಸರ ಮಿತ್ರದಂತೆ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದರ ಜೊತೆಗೆ, ಪರಿಸರದ ಕಾಳಜಿಯನ್ನು ವಹಿಸಿ, ಇತರೊಂದಿಗೆ ಪರಿಸರದ ಜ್ಞಾನ ಪಡೆದುಕೊಳ್ಳಬೇಕು ಎಂದರು.

ವಿಟ್ಲ ಸಸ್ಯ ಶ್ಯಾಮಲದ ದಿನೇಶ್ ನಾಯಕ್ ಪರಿಸರದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಹಲವಾರು ನಮ್ಮ ಸುತ್ತಮುತ್ತಲಿನ ಜೌಷಧಿ ಗಿಡ, ಗೌರಿ ಹೂವು, ಅತ್ತಿಕಾಯಿ, ನೇರಳೆ ಹಣ್ಣು, ಕಹಿಬೇವು, ಹತ್ತಿಮರ, ಅಮೃತಬಳ್ಳಿ, ಮುಂತಾದ ಗಿಡಗಳಲ್ಲಿರುವ ಜೌಷಧಿಗುಣ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಳಾರ್ಕಳಬೆಟ್ಟು, ಸಂತೆಕಟ್ಟೆ ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರಧಾನ ಮಾಡಿ, 30 ಸಾವಿರ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಿ ನೀಡಲಾಯಿತು.
10 ಶಾಲೆಗಳಿಗೆ ಜಿಲ್ಲಾ ಹಸಿರು ಶಾಲೆ ಪ್ರಶಸ್ತಿ ಹಾಗೂ ಹತ್ತು ಶಾಲೆಗಳಿಗೆ ಜಿಲ್ಲಾ ಹಳದಿ ಶಾಲೆ ಪ್ರಶಸ್ತಿ ನೀಡಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *