National
ದೇಶದಲ್ಲಿ ಕೋಟಿ ದಾಟಿದ ಕೋವಿಡ್ ಟೆಸ್ಟ್ , 7 ಲಕ್ಷ ಪೀಡಿತರು !

ನವದೆಹಲಿ, ಜುಲೈ 7 : ಒಂದೆಡೆ ಕೊರೊನಾ ಸೋಂಕು ಹರಡುವಿಕೆ ನಾಗಾಲೋಟದಲ್ಲಿದ್ದರೆ ದೇಶದಲ್ಲಿ ಕೋವಿಡ್ ತಪಾಸಣೆಯೂ ಹೆಚ್ಚುತ್ತಿದೆ. ಭಾರತದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದವರ ಸಂಖ್ಯೆ ಒಂದು ಕೋಟಿ ಮೀರಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 3,46,459 ಮಂದಿಯ ಸ್ಯಾಂಪಲ್ ಟೆಸ್ಟ್ ಆಗಿದ್ದು ಒಟ್ಟು ದೇಶದಲ್ಲಿ 1,01,35,525 ಜನರನ್ನು ಈವರೆಗೆ ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ ಸೋಮವಾರ ಸಂಜೆ ವರೆಗೆ 7,19,422 ಮಂದಿ ಸೋಂಕು ಪೀಡಿತರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

ಇದೇ ವೇಳೆ, ದೇಶದಲ್ಲಿ ಭಾರೀ ವೇಗವಾಗಿ ಹರಡುತ್ತಿರುವ ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಗಳನ್ನು ರವಾನಿಸಿದ್ದು “ಟೆಸ್ಟ್ , ಟ್ರೇಸ್, ಟ್ರೀಟ್ ” ಎನ್ನುವ ಸೂತ್ರದಡಿ ಕಾರ್ಯಾಚರಿಸಲು ನಿರ್ದೇಶನ ನೀಡಿದೆ. ದೇಶಾದ್ಯಂತ ಪರೀಕ್ಷಾ ಲ್ಯಾಬ್ ಗಳನ್ನು ಹೆಚ್ಚಿಸುವ ಮೂಲಕ ಒಂದು ಕೋಟಿಗೂ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಸದ್ಯಕ್ಕೆ 1105 ಪರೀಕ್ಷಾ ಕೇಂದ್ರಗಳಿದ್ದು ಈ ಪೈಕಿ 788 ಸರಕಾರಿ ಪ್ರಯೋಗಾಲಯಗಳಾಗಿದ್ದು 317 ಖಾಸಗಿ ಕ್ಷೇತ್ರಕ್ಕೆ ಸೇರಿದ್ದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏಳು ಲಕ್ಷ ದಾಟಿದ್ದರೆ ಅರ್ಧದಷ್ಟು ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಸಾವಿನ ಸಂಖ್ಯೆ 20 ಸಾವಿರ ದಾಟಿದೆ ಅನ್ನುವ ಮಾಹಿತಿಯನ್ನೂ ಸಚಿವಾಲಯ ನೀಡಿದೆ.