LATEST NEWS
ಸುರತ್ಕಲ್ ಟೋಲ್‌ನಲ್ಲಿ ನಾಳೆಯಿಂದ ಸ್ಥಳೀಯ ವಾಹನಗಳಿಂದಲೂ ಟೋಲ್ ಸಂಗ್ರಹ : ವ್ಯಾಪಕ ವಿರೋಧ
ಸುರತ್ಕಲ್ ಟೋಲ್‌ನಲ್ಲಿ ನಾಳೆಯಿಂದ ಸ್ಥಳೀಯ ವಾಹನಗಳಿಂದಲೂ ಟೋಲ್ ಸಂಗ್ರಹ : ವ್ಯಾಪಕ ವಿರೋಧ
ಮಂಗಳೂರು, ಫೆಬ್ರವರಿ 28 : ಸುರತ್ಕಲ್ ಟೋಲ್ ವಸೂಲತಿ ಕೇಂದ್ರದಲ್ಲಿ ನಾಳೆ ( ಮಾರ್ಚ್ 1) ರಿಂದ ಒಂದರಿಂದ ಸ್ಥಳೀಯ ವಾಹಗಳಿಂದಲೂ ಟೋಲ್ ಸಂಗ್ರಹ ಮಾಡಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸುವ ಈ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಇಂದು ಟೋಲ್ ಗೇಟ್ ಮುಂಭಾಗ ಹಮ್ಮಿಕೊಂಡಿದ್ದ “ಜನಾಗ್ರಹ ಸಭೆ” ಗೆ ಸ್ಥಳೀಯ ನಾಗರಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜನಾಗ್ರಹ ಸಭೆಯಲ್ಲಿ ಮೂವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು.ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅನ್ನು ಹೆದ್ದಾರಿ ಪ್ರಾಧಿಕಾರ ಈಗಾಗಲೇ ತೆಗೆದು ಕೊಂಡಿರುವ ತೀರ್ಮಾನದಂತೆ ವಿಳಂಬವಿಲ್ಲದೆ ಅಲ್ಲಿಂದ ತೆರವುಗೊಳಿಸಬೇಕು, ತೆರವುಗೊಳ್ಳುವವರಗೆ ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸಬಾರದು, ಜನಾಗ್ರಹ ಸಭೆಯ ಒತ್ತಾಯದ ಹೊರತಾಗಿಯೂ ಮಾರ್ಚ್ ಒಂದರಿಂದ (ನಾಳೆಯಿಂದ) ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಗೊಂಡರೆ ಸಾಮೂಹಿಕವಾಗಿ ಟೋಲ್ ಪಾವತಿಸದೆ ಪ್ರತಿರೋಧ ಒಡ್ಡುವುದು, ಯಾವುದೆ ಬೆಲೆ ತೆತ್ತಾದರು ಸ್ಥಳೀಯರಿಂದ ಟೋಲ್ ಸಂಗ್ರಹಿಸದಂತೆ ಪ್ರತಿಭಟಿಸುವುದಾಗಿ ಸಾಮೂಹಿಕವಾಗಿ ಸಭೆಯು ತೀರ್ಮಾನಿಸಿತು.
ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಯ ಸಂಚಾಲಕ ಮುನೀರ್ ಕಾಟಿಪಳ್ಳ, ತೆರವುಗೊಳಿಸುವ ತೀರ್ಮಾನ ಕೈಗೊಂಡು ವರ್ಷದ ನಂತರವೂ ಅಕ್ರಮ ಟೋಲ್ ಗೇಟ್ ಸುರತ್ಕಲ್ ನಲ್ಲಿ ಕಾರ್ಯಾಚರಿಸಲು ಸಂಸದ ನಳಿನ್ ಕುಮಾರ್ ಕಟೀಲು ಅವರ ವೈಫಲ್ಯವೇ ನೇರಕಾರಣ. “ಸ್ಥಳೀಯರಿಗೆ ಟೋಲ್ ವಿಧಿಸಿದರೆ ಟೋಲ್ ಗೇಟ್ ಒಡೆದು ಹಾಕುವೆ” ಎಂದು ಶಾಸಕ ಭರತ್ ಶೆಟ್ಟಿ ಹೇಳಿಕೆ ಒಪ್ಪತ್ತಕ್ಕದ್ದಲ್ಲ. ಶಾಸಕ, ಸಂಸದರಾದವರಿಗೆ ಕಾನೂನು, ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಾಗಬೇಕು, ಜನಪ್ರತಿನಿಧಿಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರೆ, ಸ್ಥಳೀಯ ವಾಹನ ಸವಾರರು ಟೋಲ್ ವಿನಾಯತಿಗಾಗಿ ಬೀದಿಗಿಳಿಯುವ ಸ್ಥಿತಿ ಬರುತ್ತಿರಲಿಲ್ಲ, ಸುರತ್ಕಲ್ ನಲ್ಲಿ ಟೋಲ್ ಗೇಟ್ ಅಸ್ಥಿತ್ವದಲ್ಲೇ ಇರುತ್ತಿರಲಿಲ್ಲ. ಈಗಲಾದರೂ ಶಾಸಕರು, ಸಂಸದರ ಜೊತೆಗೂಡಿ ಟೋಲ್ ಗೇಟ್ ತೆರವುಗೊಳಿಸುವ ಕುರಿತಾದ ತೀರ್ಮಾನ ಜಾರಿಗೊಳಿಸಲು ಪ್ರಯತ್ನಿಸಲಿ ಎಂದರು.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರ್, ಮಾಜಿ ಮೇಯರ್ ಹಿಲ್ಡಾ ಆಳ್ವ,ಮೂಲ್ಕಿ ಅಭಿವೃದ್ದಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್, ಸಾಮಾಜಿಕ ಹೋರಾಟಗಾರರು ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಕಾರ್ಪೊರೇಟರುಗಳಾದ ಪುರುಷೋತ್ತಮ್ ಚಿತ್ರಾಪುರ, ದಯಾನಂದ ಶೆಟ್ಟಿ, ರೇವತಿ ಪುತ್ರನ್, ಮತ್ತಿತರರು ಉಪಸ್ಥಿತರಿದ್ದರು.