LATEST NEWS
ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ- ಅರಣ್ಯ ಸಿಬ್ಬಂದಿ ಸೇರಿ 6 ಸಾವು
ಶಿಲ್ಲಾಂಗ್, ನವೆಂಬರ್ 23 : ಅಸ್ಸಾಂ-ಮೇಘಾಲಯ ಗಡಿಯಲ್ಲಿ ಮಂಗಳವಾರ ಮುಂಜಾನೆ ಮರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು ತಡೆದಿದ್ದಾರೆ. ಘಟನೆಯ ಬಳಿಕ ಗಡಿ ಪ್ರದೇಶದಲ್ಲಿ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ.
ಘರ್ಷಣೆಯ ಬಳಿಕ ಮೇಘಾಲಯ ಸರ್ಕಾರ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ.ವರದಿಗಳ ಪ್ರಕಾರ, ಮೇಘಾಲಯದ ಗಡಿಯಾದ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್‌ನಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಮುಂಜಾನೆ 3 ಗಂಟೆ ವೇಳೆಗೆ ಟ್ರಕ್ ಒಂದನ್ನು ತಡೆದಿದೆ. ಟ್ರಕ್‌ನಲ್ಲಿದ್ದವರು ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆ ಹಿಡಿಯಲು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಟ್ರಕ್‌ನ ಟೈರ್ ಪಂಕ್ಚರ್ ಮಾಡಿದ್ದಾರೆ.
ಬಳಿಕ ಅರಣ್ಯ ಸಿಬ್ಬಂದಿ ಟ್ರಕ್‌ನಲ್ಲಿದ್ದ ಮೂವರನ್ನು ಬಂಧಿಸಿ, ಜಿರಿಕಿಂಡಿಂಗ್‌ಗೆ ಕರೆತಂದಿದ್ದಾರೆ. ಘಟನೆಯ ಬಗ್ಗೆ ಅರಣ್ಯ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಹೆಚ್ಚಿನ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.
ಇದೆಲ್ಲದರ ಬಳಿಕ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಮೇಘಾಲಯದಿಂದ ಅಪಾರ ಸಂಖ್ಯೆಯ ಜನರು ಕಠಾರಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.