FILM
ಬಿಗ್ ಬಾಸ್ ನಲ್ಲಿ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ: ಹರಿದು ಬಂತು ನೆಗೆಟಿವ್ ಕಾಮೆಂಟ್
ಬೆಂಗಳೂರು, ಆಗಸ್ಟ್ 07: ಬಿಗ್ ಬಾಸ್ ಶೋ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಓಟಿಟಿಯಲ್ಲಿ ಮೂಡಿ ಬರುತ್ತಿರುವ ಎಪಿಸೋಡ್ ಬಹುತೇಕ ಚಿತ್ರೀಕರಣವಾಗಿದೆ. ಮೊದಲನೇ ಸ್ಪರ್ಧಿಯಾಗಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಾಲಿಟ್ಟವರು ಸದಾ ಒಂದಿಲ್ಲೊಂದು ವಿವಾದದಿಂದ ಖ್ಯಾತಿ ಪಡೆದಿರುವ ಟಿಕ್ ಟಾಕ್ ಸ್ಟಾರ್ ಸೋನು ಗೌಡ.
ಟಿಕ್ ಟಾಕ್ ಮೂಲಕ ಅಸಂಖ್ಯಾತ ಫಾಲೋವರ್ಸ್ ಹೊಂದಿದ್ದ ಸೋನು ಗೌಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಇವರ ಹೆಸರು ಘೋಷಣೆ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಗಳು ಹರಿದು ಬಂದಿವೆ. ಕಾರಣ, ಕನ್ನಡದಲ್ಲಿ ಅತೀ ಹೆಚ್ಚು ಟ್ರೋಲ್ ಆದ ಟಿಕ್ ಟಾಕ್ ಸ್ಟಾರ್ ಕೂಡ ಇವರಾಗಿದ್ದಾರೆ. ಈ ಹಿಂದೆ ಸೋನು ಗೌಡ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಲೀಕ್ ಆಗಿ ವೈರಲ್ ಆಗಿತ್ತು. ಇದು ಕೂಡ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು.
ಇದೇ ಸೋನು ಈ ಹಿಂದೆ ಕನ್ನಡ ಮತ್ತು ತೆಲುಗು ಸಿನಿಮಾ ರಂಗವನ್ನು ಹೋಲಿಕೆ ಮಾಡಿ, ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ಮೆಚ್ಚುವುದಕ್ಕಿಂತ ತುಳಿಯುವವರೇ ಹೆಚ್ಚು. ಹಾಗಾಗಿ ತೆಲುಗು ಸಿನಿಮಾ ರಂಗದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಾಗಿ ಸಂದರ್ಶನದಲ್ಲಿ ಹೇಳಿದ್ದರು. ಆಗಲೂ ಕೂಡ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಇದು ವಿವಾದ ಕೂಡ ಆಗಿತ್ತು.
ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಕ್ಯಾಡ್ಬರೀಸ್ ಹೆಸರಿನ ಕನ್ನಡ ಸಿನಿಮಾದಲ್ಲಿ ಅವಕಾಶ ನೀಡಲಾಯಿತು. ನಟಿಸುವುದಕ್ಕಿಂತ ಟಿಕ್ ಟಾಕ್ ಬೆಸ್ಟ್ ಎಂದು ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಬಿಗ್ ಬಾಸ್ ವಿನ್ನರ್ ಪ್ರಥಮ ಕೂಡ ಇವರನ್ನು ಕರೆದು ತಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟರು. ತಮ್ಮ ಮಾತು ಮತ್ತು ಟಿಕ್ ಟಾಕ್ ಮೂಲಕ ಸದಾ ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಿರುವ ಸೋನು ಗೌಡ, ಇವತ್ತು ಕನ್ನಡದ ಖ್ಯಾತ ನಟ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅವರು ಮನೆಯಲ್ಲಿ ಹೇಗಿರುತ್ತಾರೋ ಅದು ಬೇರೆ ಮಾತು, ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಸೋನು ಗೌಡ ಕುರಿತು ಅನೇಕರು ನೆಗೆಟಿವ್ ಕಾಮೆಂಟ್ ಬರೆಯುವ ಮೂಲಕ ಸೋನುವನ್ನು ಹೀಗೆ ನೆನಪಿಸಿಕೊಳ್ಳುತ್ತಿದ್ದಾರೆ.