LATEST NEWS
ತಮಿಳುನಾಡಿನಲ್ಲಿ ಮುಳ್ಳು ಹಂದಿ ಜೊತೆ ಕಾದಾಡಿ ಜೀವ ಬಿಟ್ಟ ಹುಲಿ.!
ಕೊಯಮತ್ತೂರು : ಅರಣ್ಯದಲ್ಲಿ ಎಂಥದ್ದೇ ಕಾದಾಟವಿರಲಿ ಕಾಡನ ರಾಜ ಹುಲಿ, ಸಿಂಹಗಳದ್ದೇ ಮೇಲುಗೈಆದರೆ, ತಮಿಳುನಾಡಿನ ಅರಣ್ಯದಲ್ಲಿ ಅಪರೂಪದ ನೈಸರ್ಗಿಕ ವಿದ್ಯಮಾನವೊಂದು ನಡೆದಿದೆ. ಮುಳ್ಳು ಹಂದಿಯ ಜೊತೆ ಕಾದಾಡಿದ 9 ವರ್ಷದ ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಇದೊಂದು ಅಪರೂಪದ ಘಟನೆ ಎನ್ನಲಾಗಿದೆ. ತಮಿಳುನಾಡಿನ ತಿರುಪ್ಪೂರು ಅರಣ್ಯ ವಲಯದ ಅಮರಾವತಿ ವಿಭಾಗದಲ್ಲಿ ಈ ಘಟನೆ ನಡೆದಿದೆ, ಮುಳ್ಳು ಹಂದಿಯ ದಾಳಿಯಿಂದಾಗಿ ಹುಲಿ ಕೊನೆಯುಸಿರೆಳೆದಿದೆ. ಅಮರಾವತಿ ಅರಣ್ಯ ವಿಭಾಗದ ಕುಝುದಕಟ್ಟಿ ಎಂಬಲ್ಲಿ ಹುಲಿಯ ಮೃತ ದೇಹ ಸಿಕ್ಕಿದ್ದು, ಹುಲಿಯ ಮೈ ತುಂಬಾ ಮುಳ್ಳುಗಳು ಹೊಕ್ಕಿವೆ. ಮುಳ್ಳು ಹಂದಿ ಜೊತೆ ಸಂಘರ್ಷ ನಡೆಸಿದ ಬಳಿಕ ಹುಲಿಯ ಮೈ ತುಂಬಾ ಮುಳ್ಳುಗಳು ಚುಚ್ಚಿಕೊಂಡಿದ್ದು, ಈ ಗಾಯದಿಂದಲೇ ಹುಲಿ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಮಾಹಿತಿ ನೀಡಿದೆ. ಸರ್ಕಾರಿ ಪಶು ವೈದ್ಯಕೀಯ ತಜ್ಞರು ಹಾಗೂ ವನ್ಯ ಜೀವಿ ತಜ್ಞರ ಸಮ್ಮುಖದಲ್ಲಿ ಈ ಮರಣೋತ್ತರ ಪರೀಕ್ಷೆ ನಡೆಯಿತು. ಪ್ರಾಥಮಿಕ ತನಿಖೆ ನಡೆದ ವೇಳೆಯಲ್ಲೇ ಪಶು ವೈದ್ಯರು ಹುಲಿಯ ಸಾವಿಗೆ ಕಾರಣ ಪತ್ತೆ ಹಚ್ಚಿದ್ದರು. 9 ವರ್ಷ ವಯಸ್ಸಿನ ಈ ಗಂಡು ಹುಲಿ, ಮುಳ್ಳು ಹಂದಿ ಜೊತೆ ಸಂಘರ್ಷ ನಡೆಸಿದ ಕುರುಹುಗಳಿದ್ದವು. ಹುಲಿಯ ಎರಡು ಮುಂಗಾಲು ಹಾಗೂ ಮೊಣಕಾಲಿನಲ್ಲಿ ಗಾಯದ ಗುರುತುಗಳಿದ್ದವು. ಜೊತೆಯಲ್ಲೇ ಈ ಹುಲಿ ಮುಳ್ಳು ಹಂದಿಯನ್ನು ಕೊಂದು ಅದನ್ನು ತಿಂದು ಹಾಕಿರುವ ಕುರುಹೂ ಲಭ್ಯವಾಗಿದೆ. ಹುಲಿಯ ಹೊಟ್ಟೆ ಒಳಗೂ ಮುಳ್ಳು ಹಂದಿಯ ಮುಳ್ಳುಗಳು ಸಿಕ್ಕಿವೆ.