Connect with us

    LATEST NEWS

    ಹುಲಿ ವೇಷಧಾರಿಗಳ ಮೈಮೇಲೆ ಆವೇಶ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ ವಿರೋಧ ಚರ್ಚೆ

    ಮಂಗಳೂರು ಅಕ್ಟೋಬರ್ 21: ಹುಲಿವೇಷಧಾರಿಗಳ ಮೈಮೇಲೆ ಆವೇಷ ವಿಚಾರವಾಗಿ ಕರಾವಳಿಯಲ್ಲಿ ಚರ್ಚೆ, ವಾದ ಪ್ರತಿವಾದ ಜೋರಾಗಿದೆ. ಹುಲಿವೇಷ ಊದು ಪೂಜೆಯ ವೇಳೆ ಹಲವರಿಗೆ ಆವೇಶ ಬರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.


    ಕರಾವಳಿಯ ಜನಪ್ರಸಿದ್ಧ ಜನಪದ ಕಲೆ ಹುಲಿವೇಷ. ಹುಲಿವೇಷಕ್ಕೆ ತನ್ನದೇ ಆದ ಮಹತ್ವ ಇದೆ. ಕರಾವಳಿಯ ಪ್ರಮುಖ ಹಬ್ಬಗಳಲ್ಲಿ ಹುಲಿವೇಷ ಪ್ರಮುಖ ಪಾತ್ರವಹಿಸುತ್ತಿದೆ. ಹುಲಿವೇಷ ಹಾಕುವ ಮೊದಲು ಊದು ಪೂಜೆ ಸಲ್ಲಿಸುತ್ತಾರೆ. ಈ ವೇಳೆ ಕೆಲವರಿಗೆ ಆವೇಷ ಬರುತ್ತದೆ ಎಂಬ ನಂಬಿಕೆ ಇದೆ. ಇದೀಗ ಹುಲಿ ವೇಷಕ್ಕೆ ಆವೇಶ ಬರುವುದೇ ಸುಳ್ಳು ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಆವೇಶ ಮತ್ತು ಆಕರ್ಷಣೆ ಸಹಜ ಎಂದು ಹಲವರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹುಲಿವೇಷ ಆವೇಶ ವಿಚಾರ ತಾರಕಕ್ಕೇರಿದೆ.


    ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ, ಹುಲಿ ವೇಷ ಕಲಾವಿದೆ ಸುಷ್ಮಾ ರಾಜ್ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು, ಬಳಿಕ ಈ ವಿಚಾರ ವೈರಲ್ ಆಗಿ, ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಸುಷ್ಮಾ ಅವರ ವಿಡಿಯೋದಲ್ಲಿ ಹುಲಿ ವೇಷ ಹಾಕಿದವರಿಗೆ ಆವೇಶ ಬರುವುದೇ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ. ಈ ವಿಚಾರ ನಾನು ಹೇಳಲೇಬಾರದು ಎಂದಿದ್ದೆ. ಹುಲಿ ಮೈಮೇಲೆ ಬರುವ ಕಾಯಿಲೆ ಈಗ ಉಡುಪಿಯಿಂದ ಮಂಗಳೂರಿಗೆ ವಿಸ್ತರಣೆಯಾಗಿದೆ. ನಮ್ಮಲ್ಲಿ ಹಲವು ವರ್ಷಗಳಿಂದ ಹುಲಿವೇಷ ಹಾಕುತ್ತಿರುವ ಅನುಭವಿಗಳಿದ್ದಾರೆ. ನನ್ನ ತಂದೆಯು ಹಿರಿಯ ಹುಲಿ ವೇಷದಾರಿಯಾಗಿದ್ದರು. ಅವರು ಕೂಡ ಈ ಆವೇಶ ಬರುವುದನ್ನು ನಂಬುತ್ತಿರಲಿಲ್ಲ ಎಂದಿದ್ದಾರೆ.


    ಅಲ್ಲದೆ ಉಡುಪಿಯ ಹಿರಿಯ ಹುಲಿ ವೇಷದಾರಿಯೊಬ್ಬರು ಹೇಳಿಕೆ ನೀಡಿ, ನಾನು 52 ವರ್ಷಗಳಿಂದ ಹುಲಿ ವೇಷ ಹಾಕುತ್ತಿದ್ದೇನೆ. ಅನೇಕ ಕ್ಷೇತ್ರಗಳಲ್ಲಿ ನಾನು ಹುಲಿವೇಷ ಹಾಕಿದ್ದೇನೆ. ಈವರೆಗೆ ನನಗೆ ಒಮ್ಮೆಯೂ ಆವೇಶ ಬಂದಿಲ್ಲ. ಹುಲಿ ಚಾಮುಂಡಿ ಕ್ಷೇತ್ರದಲ್ಲೂ ಹುಲಿ ವೇಷ ಹಾಕಿದ್ದೇನೆ. ಎಲ್ಲೂ ಕೂಡ ನನಗೆ ದರ್ಶನ ಬಂದಿಲ್ಲ. ಈಗ ಗಲ್ಲಿ ಗಲ್ಲಿಯಲ್ಲಿ ಹುಲಿ ವೇಷದಾರಿಗಳು ಆವೇಶ ಬಂದಂತೆ ನಟಿಸುತ್ತಾರೆ. ಈಗ ಮಂಗಳೂರಿನಲ್ಲೂ ಇದು ಶುರುವಾಗಿದೆ.  ಹುಲಿ ವೇಷದಾರಿಗೆ ದರ್ಶನ ಆವೇಶ ಬರಬಾರದು. ದರ್ಶನ ಪಾತ್ರಿಗಳು ಈ ವಿಷಯದಲ್ಲಿ ಯಾಕೆ ಮಾತನಾಡುವುದಿಲ್ಲ? ಪ್ರತಿಯೊಬ್ಬ ವೇಷದಾರಿಯು ಈಗ ಆವೇಶ ಬಂದಂತೆ ಮಾಡುತ್ತಾರೆ. ಆವೇಶ ಬರುವುದನ್ನು ಕಂಡಾಗ ನನಗೆ ಬೇಸರವಾಗುತ್ತದೆ ಎಂದಿದ್ದಾರೆ.

    ಸುಷ್ಮಾ ರಾಜ್ ಹೇಳಿಕೆಗೆ ಹುಲಿವೇಷ ದಾರಿಗಳು ಕೌಂಟರ್ ಕೊಟ್ಟಿದ್ದಾರೆ. ಉಡುಪಿಯ ಪ್ರಸಿದ್ಧ ಹುಲಿ ವೇಷದಾರಿ ಚೇತನ್ ಹೇಳಿಕೆ ನೀಡಿ ನಾನು ಹಲವು ಸಂಘಟನೆಗಳಲ್ಲಿ ಹುಲಿ ವೇಷ ಸೇವೆ ಮಾಡುತ್ತೇನೆ. ಹುಲಿ ವೇಷದ ಕಾರ್ಣಿಕ ಸಂಸ್ಕೃತಿ ಎಲ್ಲಾ ತುಳುನಾಡಿನವರಿಗೆ ಗೊತ್ತು. ಆವೇಶ ಬರುವುದು ಸುಳ್ಳು ಆಡಂಬರ ಎನ್ನುತ್ತಾರೆ. ವಿಡಿಯೋ ಗೋಸ್ಕರ ಈ ರೀತಿ ಮಾಡುತ್ತಾರೆ ಎಂದು ಹೇಳಿದ್ದಾರೆ.
    ಹುಲಿವೇಷಧಾರಿಗೆ ಮೈ ಮೇಲೆ ಆವೇಶ ಬರುವುದು ಹುಲಿದೈವ ಅಲ್ಲ. ನಾವು ಹತ್ತಿರದಿಂದ ಹಲವರನ್ನು ನೋಡಿದ್ದೇವೆ. ವೇಷದಾರಿಯ ಮನೆಯ ದೈವಗಳು ಆವೇಶ ಬರಬಹುದು. ವೇಷ ಹಾಕಿದ ಕ್ಷೇತ್ರದ ದೈವದ ಆಕರ್ಷಣೆ ಆಗಬಹುದು. ಸಾನಿಧ್ಯದ ಶಕ್ತಿ ಆವೇಶ ಬರಬಹುದು. ಹುಲಿಯೇ ಆವೇಶ ಬರುತ್ತದೆ ಎಂದು ಯಾರೂ ಹೇಳಿಲ್ಲ. ಇದರ ಬಗ್ಗೆ ನಿಂದನೆ ಮಾಡುವವರು ಗಮನಿಸಬೇಕು. ನಾನು ಹೇಳುವ ಕ್ಷೇತ್ರಕ್ಕೆ ಬಂದು ಹುಲಿವೇಷ ಹಾಕುತ್ತೀರಾ? ಕ್ಷೇತ್ರಕ್ಕೆ ಬಂದು ವೇಷ ಹಾಕಿ ಎಂದು ಚೇತನ್ ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಆವೇಶ ಬರುತ್ತದೆ ಅಥವಾ ಬರುವುದಿಲ್ಲ ಎಂಬುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply