DAKSHINA KANNADA
ಅಂದು ವೃದ್ದೆಯೊಬ್ಬರನ್ನು ರಸ್ತೆ ಇಲ್ಲ ಎಂದು ಬಡಿಗೆಯಲ್ಲಿ ಹೊತ್ತೊಯ್ದವರು ಇಂದು ಅದೇ ಮಾರ್ಗದಲ್ಲಿ 2 ಕ್ವಿಂಟಾಲ್ ಅಡಿಕೆ ಸಾಗಾಟ ಮಾಡಿದ್ದಾರೆ!
ಸುಳ್ಯ , ಆಗಸ್ಟ್ 25 : ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ವೃದ್ಧ ಮಹಿಳೆಯೊಬ್ಬರನ್ನು ಎರಡು ಕಿ.ಮೀ ದೂರ ಮುಖ್ಯರಸ್ತೆಗೆ ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದೊಯ್ದ ಘಟನೆ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ ಎಂಬಲ್ಲಿ ನಡೆದಿದ್ದು, ಈ ವೀಡಿಯೋ ರಾಜ್ಯದ ಖಾಸಗಿ ಸುದ್ದಿ ಮಾದ್ಯಮದಲ್ಲಿಗಳಲ್ಲಿ ಸೇರಿದಂತೆ ಎಲ್ಲೆಡೆ ಭಾರಿ ಸುದ್ದಿಯಾಗಿತ್ತು.
ಈ ಘಟನೆಯ ಬಳಿಕ ಈ ರೀತಿ ಮಾಡಿದವರ ವಿರುದ್ಧ ಆ ಭಾಗದಲ್ಲಿ ನಿತ್ಯ ಸಂಚರಿಸುವ ಸ್ಥಳೀಯರೇ ಅವರ ವಿರುದ್ಧ ತಿರುಗಿ ಬಿದ್ದ ಘಟನೆಯೂ ನಡೆದಿತ್ತು. ಇದೀಗ ಈ ಘಟನೆಯ ಅಸಲಿಯತ್ತನ್ನು ಆ ಭಾಗದಲ್ಲಿ ವಾಸಿಸುತ್ತಿರುವ ಜನರೇ ಬಟಾಬಯಲು ಮಾಡಿದ್ದಾರೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳಕ್ಕ ಎಂಬಲ್ಲಿ ಆ.19ರಂದು ಈ ಘಟನೆ ನಡೆದಿತ್ತು. ಎಪ್ಪತ್ತು ವರ್ಷದ ಮಹಿಳೆ ಕಮಲ ಅವರು ಕಾಲು ನೋವಿನಿಂದ ನರಳುತ್ತಿದ್ದ ಹಿನ್ನೆಲೆಯಲ್ಲಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು. ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದಾರೆ ಎಂದು ಕಥೆ ಕಟ್ಟಿ ವೃದ್ಧ ಮಹಿಳೆಯನ್ನು ಮರದ ಬಾಡಿಗೆಯಲ್ಲಿ ಹೊತ್ತುಕೊಂಡು ಹೋಗುತ್ತಿರುವ ವೀಡಿಯೋವನ್ನು ಗಂಗಾಧರ ಬಳಕ್ಕ ಎಂಬವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು, ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು.
ಹಾಗಾದರೆ ಈ ವಿಡಿಯೋದ ಅಸಲಿಯತ್ತೇನು ?
ಈ ಘಟನೆ ಬಳಿಕ ಈ ಭಾಗದ ಕೆಲವು ಸ್ಥಳೀಯರು ಗಂಗಾಧರ ಅವರು ಈ ರೀತಿ ಆರೋಪ ಮಾಡಿ ವಿಡಿಯೋ ಹರಿಬಿಟ್ಟದ್ದನ್ನು ವಿರೋಧಿಸಿದ್ದರು. ಇಂದು ಮುಂಜಾನೆ ಮರದ ಬಡಿಗೆಯಲ್ಲಿ ಎತ್ತಿಕೊಂಡು ಹೋದ ವೃದ್ಧೆಯ ಮನೆಯಿಂದಲೇ ಜೀಪ್ ಒಂದರಲ್ಲಿ ಸುಮಾರು ಆರೂವರೆ ಕ್ವಿಂಟಾಲ್ ಅಡಿಕೆಯನ್ನು ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರು ಜೀಪನ್ನು ಅಡ್ಡಗಟ್ಟಿ ಇಂದು ನಿಮ್ಮ ಮನೆಗೆ ವಾಹನ ಹೇಗೆ ಬಂತು? ಅಂದು ಯಾವುದೇ ಮಳೆ ಇರದೇ ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದ ಸಂದರ್ಭದಲ್ಲಿ ನೀವು ವೃದ್ಧ ಮಹಿಳೆಯನ್ನು ಮರದ ಬಡಿಗೆಯಲ್ಲಿ ಹೊತ್ತುಕೊಂಡು ಹೋದಿರಿ, ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಮನೆಗೆ ಜೀಪ್ ಹೇಗೆ ಬಂತು ಎಂದು ಆಕ್ರೋಶದಿಂದ ನುಡಿದಿದ್ದಾರೆ.
ಅಂದು ಘಟನೆ ನಡೆದ ದಿನ ಕೂಡ ಇದೇ ಜೀಪು ನಿಮ್ಮ ಮನೆಯಿಂದ 500 ಮೀಟರ್ ದೂರದಲ್ಲೇ ನಿಂತಿತ್ತು. ಅಂದು ನೀವು ಯಾಕೆ ಜೀಪ್ ನಲ್ಲಿ ಅಸಹಾಯಕ ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ? ಸುಮ್ಮನೆ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಮತ್ತು ಶಾಸಕರ ತೇಜೋವಧೆ ಮಾಡಿದ್ದಲ್ಲದೆ ಈ ಭಾಗದ ಮರ್ಯಾದೆಯನ್ನು ಕಳೆದಿದ್ದೀರಿ, ಎಂದೆಲ್ಲ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಈ ವೇಳೆ ಸ್ಥಳೀಯರ ಸಾಲು ಸಾಲು ಪ್ರಶೆಗೆ ಉತ್ತರಿಸಲಾಗದೆ ಪೇಚಿಗೆ ಸಿಲುಕಿದ ವೃದ್ಧ ಮಹಿಳೆಯನ್ನು ಹೊತ್ತುಕೊಂಡ ಹೋಗಿದ್ದ ವಸಂತ ಗೌಡ ಅವರು ನಾವು ಹೀಗೆ ಮಾಡಿದ್ದು ನಿಜ. ಆ ನೆಪದಲ್ಲಾದರೂ ನಮ್ಮ ಊರಿನ ರಸ್ತೆ ಅಭಿವೃದ್ಧಿ ಕಾಣಬಹುದು ಎಂದು ಈ ರೀತಿ ಮಾಡಿದ್ದಾಗಿ ಸಾರ್ವಜನಿಕರ ಮುಂದೆ ಒಪ್ಪಿಕೊಂಡಿದ್ದಾರೆ.
ಈ ಎಲ್ಲಾ ಪ್ರಹಸನದ ಹಿಂದೆ ಸ್ಥಳೀಯ ಕಾಂಗ್ರೆಸ್ ಮುಖಂಡನೊಬ್ಬನ ಕೈವಾಡ ಇದೆ, ಆತನ ರಾಜಕೀಯ ಬೇಳೆ ಬೇಯಿಸುವ ಸಲುವಾಗಿ ಈ ರೀತಿ ಮಾಡಿದ್ದಾನೆ. ಈ ಭಾಗದ ನಿವಾಸಿಯೇ ಅಲ್ಲದ ಆತ ರಾಜ್ಯದ ಸುದ್ದಿ ಮಾಧ್ಯಮ ಒಂದರಲ್ಲಿ ಮಾತನಾಡಿ ಜನರಿಗೆ ತಪ್ಪು ಸಂದೇಶ ಕೊಟ್ಟಿದ್ದಲ್ಲದೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಮತ್ತು ಶಾಸಕರ ಘಟನೆಯನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದಾನೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.