LATEST NEWS
ಮಂಗಳೂರಿನ ಈ ಹುಲಿವೇಷದ ತಂಡಕ್ಕೆ ಇದೇ ವೆಸ್ಟ್ ಇಂಡಿಸ್ ಕ್ರಿಕೆಟ್ ನ ಸೊಬಗಿನ ಆಟಗಾರನ ಹೆಸರು….!!
ಮಂಗಳೂರು ಅಕ್ಟೋಬರ್ 24: ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಹುಲಿವೇಷ ತಂಡಕ್ಕೂ ವೆಸ್ಟ್ ಇಂಡಿಸ್ ಕ್ರಿಕೆಟ್ ತಂಡಕ್ಕೂ ಒಂದು ಅವಿನಾಭಾವ ಸಂಬಂಧ, ಕಳೆದ 40 ವರ್ಷಗಳಿಂದ ಹುಲಿವೇಷ ಧರಿಸುವ ತಂಡದ ಹೆಸರು ವೆಸ್ಟ್ ಇಂಡಿಸ್ ಕ್ರಿಕೆಟ್ ನ ಸೂಪರ್ ಬ್ಯಾಟ್ಸಮನ್ ನ ಹೆಸರು, ಕರಾವಳಿಯ ಹುಲಿವೇಷ ಹಾಗೂ ಕೆರೆಬಿಯನ್ ನ ಕ್ರಿಕೆಟ್ ದಂತಕಥೆ ಏನಿದು ಸ್ಟೋರಿ…!!
ಕರಾವಳಿಯ ಹುಲಿವೇಷಕ್ಕೆ ತನ್ನದೇ ಆದ ಇತಿಹಾಸವಿದೆ. ದಕ್ಷಿಣಕನ್ನಡದಲ್ಲಿ ಹುಲಿವೇಷದ ಹಲವಾರು ತಂಡಗಳು ಇದ್ದು, ಕರಾವಳಿಯ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿವೆ. ಈ ತಂಡಗಳಲ್ಲಿ ಬೋಳಾರದ ಕಾಳಿಚರಣ್ ಪ್ರೆಂಡ್ಸ್. ಕಾಳಿಚರಣ್ ಹೆಸರೇ ಒಂದು ಅಟ್ರ್ಯಾಕ್ಷನ್ ತಂದುಕೊಡುವ ಹೆಸರಾಗಿದ್ದು, ಈ ತಂಡಕ್ಕೆ ಕಾಳಿ ಚರಣ್ ಎಂಬ ಹೆಸರು ಏಕೆ ಬಂತು ಅನ್ನೊಂದು ಒಂದು ಕಥೆ.
ಮಂಗಳೂರಿನ ಬೋಳಾರದ ಬೊಕ್ಕಪಟ್ನ ಪರಿಸರದಲ್ಲಿ ಗಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಯುವಕರ ತಂಡಕ್ಕೆ ಅಂದಿನ ವೆಸ್ಟ್ ಇಂಡೀಸ್ ತಂಡದ ಖ್ಯಾತ್ ಆಲ್ ರೌಂಡರ್, ಓಪನಿಂಗ್ ಬ್ಯಾಟ್ಸ್ ಮೆನ್ ಅಲ್ವಿನ್ ಕಾಳಿಚರಣ್ ಸ್ಟಾರ್ ಆಟಗಾರನಾಗಿದ್ದರು. ಆ ದಿನಗಳಲ್ಲಿ ಗಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ತಂಡವನ್ನು ಕರೆದೊಯ್ಯುತ್ತಿದ್ದ ಅಂದಿನ ಯುವಕರಿಗೆ ತಮ್ಮ ತಂಡಕ್ಕೆ ಹೆಸರೊಂದನ್ನು ಇಡಬೇಕೆಂದು ಯೋಚನೆ ಬಂದಿತ್ತು. ಆಗ ಅವರ ಯೋಚನೆಗೆ ಬಂದ ಹೆಸರೇ ಕಾಳಿಚರಣ್. ಕಾಳಿಚರಣ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡ ಈ ತಂಡ ಬಳಿಕದ ದಿನಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ನವರಾತ್ರಿಗೆ ಹುಲಿ ವೇಷವನ್ನು ಹಾಕಲು ಪ್ರಾರಂಭಿಸಿತ್ತು. ಹುಲಿ ವೇಷ ತಂಡಕ್ಕೂ ಕ್ರಿಕೆಟ್ ತಂಡಕ್ಕೆ ಇಟ್ಟಿದ್ದಂತಹ ಕಾಳಿಚರಣ್ ಫ್ರೆಂಡ್ಸ್ ಎನ್ನುವ ಹೆಸರನ್ನೇ ಇಡಲಾಗಿತ್ತು. ಇದೀಗ ಈ ಕಾಳಿಚರಣ್ ಹುಲಿವೇಷ ತಂಡಕ್ಕೆ 39 ನೇ ವರ್ಷದ ಸಂಭ್ರಮವಾಗಿದ್ದು, ಕಾಳಿಚರಣ್ ಹೆಸರಿನ ಹಿಂದಿನ ರಹಸ್ಯ ಮಾತ್ರ ಹುಲಿವೇಷವನ್ನು ಸವಿಯುವ ಬಹುತೇಕ ಮಂದಿಗೆ ತಿಳಿದೇ ಇಲ್ಲ.
ದಕ್ಷಿಣಕನ್ನಡದಲ್ಲಿ ನೂರಾರು ಹುಲಿವೇಷ ತಂಡಗಳಿದ್ದರೂ, ಮಂಗಳೂರು ದಸರಾ ಮೆರವಣಿಗೆಯಲ್ಲಿ ಗಮನ ಸೆಳೆಯುವ ಕೆಲವೇ ಕೆಲವು ಹುಲಿವೇಷ ತಂಡಗಳಲ್ಲಿ ಕಾಳಿಚರಣ್ ತಂಡವೂ ಒಂದು. ಮಂಗಳೂರು ದಸರಾದ ಮೆರವಣಿಗೆಯಲ್ಲಿ ಭಾಗವಹಿಸುವ ಹುಲಿವೇಷ ತಂಡಗಳಲ್ಲಿ ದಸರಾದ ಆಕರ್ಷಣೆಯ ಕೇಂದ್ರಬಿಂದುವೂ ಆಗಿರುವ ಕಾಳಿಚರಣ್ ತಂಡಕ್ಕೆ ದಸರಾ ಉತ್ಸವದಲ್ಲಿ ಎರಡೇ ಗೌರವವನ್ನು ಪಡೆಯುತ್ತಿದೆ. 7 ಸದಸ್ಯರಿಂದ ಆರಂಭಗೊಂಡ ಕಾಳಿಚರಣ್ ಹುಲಿವೇಷ ತಂಡದಲ್ಲಿ ಇದೀಗ 70 ಕ್ಕೂ ಮಿಕ್ಕಿದ ಹುಲಿವೇಷಧಾರಿಗಳಿದ್ದಾರೆ. ಅಲ್ಲದೆ ಹುಲಿವೇಷದಲ್ಲಿ ಬ್ಲಾಕ್ ಟೈಗರ್ ಕಾನ್ಸೆಪ್ಟ್ ಅನ್ನ ಪರಿಚಯಿಸಿದ ಶ್ರೇಯಸ್ಸೂ ಈ ಕಾಳಿಚರಣ್ ತಂಡಕ್ಕೆ ಲಭಿಸುತ್ತದೆ. 39 ವರ್ಷಗಳ ಹಿಂದೆ ಪರಿಚಯಿಸಿದ ಕಪ್ಪು ಹುಲಿಯ ಮುಖವಾಡವನ್ನು ಇಂದಿಗೂ ಈ ತಂಡ ಉಪಯೋಗಿಸುತ್ತಿದ್ದು, ಕುರಿ ಉಣ್ಣೆಯನ್ನು ಈ ಮುಖವಾಡಕ್ಕೆ ಬಳಸಲಾಗಿದ್ದು, ಉಳಿದ ಹುಲಿವೇಷಧಾರಿಗಳು ಬಳಸುವ ಮುಖವಾಡಕ್ಕೆ ಬೇಕಾದ ಸಾಮಾಗ್ರಿಗಳನ್ನು ವಿದೇಶಗಳಿಂದ ತರಿಸಿ ಸಿದ್ಧಪಡಿಸಲಾಗಿದೆ.
ತುಳುನಾಡಿನಲ್ಲಿ ಹುಲಿವೇಷವನ್ನು ಹರಕೆಯಾಗಿ ಹಾಕುವ ಹಲವರಿಗೆ ಕಾಳಿಚರಣ್ ತಂಡ ಅವಕಾಶವನ್ನು ನೀಡುತ್ತಿದ್ದು, ಆ ಮೂಲಕ ಹರಕೆಯನ್ನು ತೀರಿಸುವ ಕಾರ್ಯವನ್ನೂ ಮಾಡುತ್ತಿದೆ. ಹುಲಿವೇಷಕ್ಕಾಗಿ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ನೀಡುವ ಸಾಮಾಜಿಕ ಕಳಕಳಿಯ ಕೆಲಸವನ್ನು ಈ ತಂಡ ಮಾಡುತ್ತಿದೆ.