DAKSHINA KANNADA
ಬೆಂಕಿ ಬಿದ್ದಿದೆ ಅಂದರೆ ನಮ್ಮಲ್ಲಿ ಗಾಡಿ ಇಲ್ಲ ಎಂದ ಅಗ್ನಿಶಾಮಕದಳ!

ಕಾರ್ಕಳ, ಮಾರ್ಚ್ 22: ಕಾರ್ಕಳದ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಕುದ್ರೊಟ್ಟುವಿನ ಪಾಲ್ದಡಿ ಎಂಬಲ್ಲಿ ನಿನ್ನೆ ಸಾಯಂಕಾಲ ಆಕಸ್ಮಿಕವಾಗಿ ಕೃಷಿ ತೋಟಕ್ಕೆ ಬೆಂಕಿ ಬಿದ್ದು ಅಪಾರ ಹಾನಿಯಾಗಿದೆ. ಬೈಹುಲ್ಲಿನ ಬೃಹತ್ ರಾಶಿಯೊಂದು ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಕೃಷಿ ತೋಟಕ್ಕೆ ಬಳಸುತ್ತಿದ್ದ ಪಂಪ್‌ಶೆಡ್ ಕೂಡ ಸುಟ್ಟು ಕರಕಲಾಗಿದೆ.
ಅಲ್ಲದೇ ತೆಂಗು, ಹಲಸು, ಮಾವಿನ ಮರಗಳು ಕೂಡಾ ಬೆಂಕಿಗೆ ಆಹುತಿಯಾಗಿದೆ. ಮೇಯಲು ಕಟ್ಟಿದ್ದ ಹಲವು ಜಾನುವಾರುಗಳನ್ನು ಕೂಡಲೇ ಸ್ಥಳೀಯರು ರಕ್ಷಿಸಿದ್ದಾರೆ. ಕೃಷಿ ತೋಟಕ್ಕೆ ಬೆಂಕಿ ಬಿದ್ದು ಉರಿಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಕಾರ್ಕಳದ ಅಗ್ನಿಶಾಮಕದಳದವರನ್ನು ಫೋನ್ ಮಾಡಿ ಸಂಪರ್ಕಿಸಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲವೆಂದು ಆರೋಪಿಸಿದ್ದಾರೆ.

ನಮ್ಮಲ್ಲಿರುವ ಎರಡೂ ವಾಹನಗಳು ಬೇರೆ ಕಡೆ ಹೋಗಿವೆ ಎಂದು ತಿಳಿಸಿದ್ದು, ಬಳಿಕ ಮೂಡುಬಿದ್ರೆಯ ಅಗ್ನಿಶಾಮಕದಳವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಮೂಡಬಿದ್ರೆಗೆ ಸಂಪರ್ಕಿಸಿದಾಗ, ನಮ್ಮ ವಾಹನಗಳು ನೀರನ್ನು ತುಂಬಿಸಲು ಹೋಗಿದೆ ಎಂದು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಮಾರು 2-3 ಎಕರೆಯಷ್ಟು ಜಮೀನಿಗೆ ಬೆಂಕಿ ಬಿದ್ದು ಸುಟ್ಟು ಹೋದರೂ ಅಗ್ನಿಶಾಮಕದಳದವರ ಸರಿಯಾದ ಸ್ಪಂದನೆಯೇ ಸಿಗದೆ, ಸ್ಥಳೀಯರೇ ಸೇರಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.