KARNATAKA
ವಯನಾಡು ದುರಂತದಲ್ಲಿ ಮಡಿದ ಮಂಡ್ಯದ ಅಜ್ಜಿ, ಮೊಮ್ಮಗ, ಕುಟುಂಬದವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ..!
ಮಂಡ್ಯ: ಕೇರಳದ ವಯನಾಡು ದುರಂತದಲ್ಲಿ ಪ್ರಾಣ ಕಳಕೊಂಡ ಮಂಡ್ಯ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಅಜ್ಜಿ ಮತ್ತು ಮೊಮ್ಮಗನ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯರಾತ್ರಿ ನೆರವೇರಿಸಲಾಯಿತು.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟದ 55 ವರ್ಷದ ಲೀಲಾವತಿ ಹಾಗೂ 2.5 ವರ್ಷದ ಮೊಮ್ಮಗ ನಿಹಾಲ್ ಮೃತಪಟ್ಟಿದ್ದರು. ಮೃತ ನಿಹಾಲ್ ತಾಯಿ ಝಾನ್ಸಿ ಅವರು ಅಜ್ಜಿ ಮೊಮ್ಮಗನ ಅಂತ್ಯ ಸಂಸ್ಕಾರ ನಮ್ಮೂರಿನಲ್ಲಿಯೇ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕರ್ನಾಟಕ ಸರ್ಕಾರ ಕೊನೆಗೂ ಆ ತಾಯಿ ಹೃದಯದ ಆಸೆ ನೆರವೇರಿಸಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಕೇರಳ ಸರ್ಕಾರದ ಜೊತೆ ಮಾತನಾಡಿ ಮೃತದೇಹ ರವಾನೆಗೆ ಅವಕಾಶ ಮಾಡಿಕೊಟ್ಟಿದೆ. ಕೇರಳದ ವಿಮ್ಸ್ ಆಸ್ಪತ್ರೆಯಿಂದ ಕೆ.ಆರ್ ಪೇಟೆಗೆ ಮೃತದೇಹಗಳು ಎರಡು ಫ್ರೀಜರ್ ಆ್ಯಂಬುಲೆನ್ಸ್ನಲ್ಲಿ ಪ್ರತ್ಯೇಕವಾಗಿ ತರಲಾಗಿದೆ. ಮೃತದೇಹಗಳು ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರು, ನೆಂಟರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಅವರ ಜಮೀನಿನಲ್ಲಿ ಅಜ್ಜಿ, ಮೊಮ್ಮಗನನ್ನು ಒಂದೇ ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು. ಗ್ರಾಮಸ್ಥರು ಸೇರಿದಂತೆ ಶಾಸಕ ಹೆಚ್.ಟಿ. ಮಂಜು ಅಂತಿಮ ದರ್ಶನ ಪಡೆದರು.