DAKSHINA KANNADA
ಕಾಂತಾರ-2 ಚಿತ್ರಕ್ಕೆ 450 ವರ್ಷ ಇತಿಹಾಸವಿರುವ ಚಂದ್ರಾಯುಧ ನೀಡಲು ಮುಂದಾದ ರಾಜಮನೆತನ….
ಕಾಸರಗೋಡು, ಡಿಸೆಂಬರ್ 08 : ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ಕಾಂತಾರ ಸೂಪರ್ ಹಿಟ್ ಆದ ಬಳಿಕ ಕಾಂತಾರ-2 ಚಿತ್ರಕ್ಕೆ ಈಗಾಗಲೇ ಮುಹೂರ್ತ ನಡೆದಿದೆ. ಕಾಂತಾರದಲ್ಲಿ ತುಳುನಾಡಿನ ಆರಾಧ್ಯ ದೈವ ಪಂಜುರ್ಲಿಯನ್ನು ಮೂಲ ಕಥಾವಸ್ತುವನ್ನಾಗಿಟ್ಟು ಚಿತ್ರದ ಕಥೆಯನ್ನು ಹಣೆಯಲಾಗಿದೆ.
ಆದರೆ ಕಾಂತಾರ-2 ರಲ್ಲಿ ರಿಷಬ್ ಶೆಟ್ಟಿ ದೈವಾರಾಧನೆಯ ಜೊತೆಗೆ ತುಳುನಾಡಿನ ಚರಿತ್ರೆಯೂ ಈ ಚಿತ್ರದಲ್ಲಿರಲಿದೆ. ತುಳುನಾಡಿನ ಚರಿತ್ರೆ ಎಂದ ಮೇಲೆ ತುಳುನಾಡಿನ ಸೃಷ್ಠಿಕರ್ತ ಪರಶುರಾಮನ ಕಥೆ ಇಲ್ಲದೇ ಹೋದಲ್ಲಿ ತುಳುನಾಡಿನ ಚರಿತ್ರೆ ಅಪೂರ್ಣವೇ. ಪರಶುರಾಮ ತನ್ನ ತಂದೆಯ ಸಾವಿಗೆ ಸೇಡು ತೀರಿಸಲು ಇಡೀ ಕ್ಷತ್ರಿಯ ವಂಶವನ್ನು ಬಲಿ ತೆಗೆಯಲು ಬಳಸಿದ್ದ ಚಂದ್ರಾಯುಧದಂತಹದೇ ಕೊಡಲಿಯೊಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚಿಪ್ಪಾರು ಅರಮನೆಯಲ್ಲಿದೆ.
ಸುಮಾರು 400-450 ವರ್ಷ ಇತಿಹಾಸವಿರುವ ಈ ಚಂದ್ರಾಯುಧದ ಹಿಡಿಯನ್ನು ಗಂಧದ ಹುಡಿಯನ್ನು ಬಳಸಿ ಮಾಡಲಾಗಿದೆ. 450 ವರ್ಷ ಕಳೆದರೂ ಇಂದಿಗೂ ಅತ್ಯಂತ ಗಟ್ಟಿಮುಟ್ಟಾಗಿ ಇರುವ ಈ ಆಯುಧವನ್ನು ಚಿಪ್ಪಾರು ರಾಜಮನೆತನದ ಮಂದಿ ಇಂದಿಗೂ ಉಳಿಸಿಕೊಂಡಿದ್ದಾರೆ. ಈ ಆಯುಧವನ್ನು ತುಳುನಾಡಿನ ಚರಿತ್ರೆಯ ಚಿತ್ರಕಥೆಯಿರುವ ಕಾಂತಾರ-2 ನಲ್ಲಿ ರಿಷಬ್ ಶೆಟ್ಟಿ ಬಯಸಿದಲ್ಲಿ ಈ ಆಯುಧವನ್ನು ನೀಡಿ ಸಹಕರಿಸಲು ಚಿಪ್ಪಾರು ಮನೆತನದ ಹಿರಿಯರಾದ ತಿರುಮಲ ಬಳ್ಳಾಲ್ ಉತ್ಸುಕರಾಗಿದ್ದಾರೆ.
ರಾಜ ಮನೆತನದ ಹಿರಿಯರು ಈ ಆಯುಧವನ್ನು ಕಾಡುಪ್ರಾಣಿಗಳ ಬೇಟೆಯಾಡಲು ಬಳಸುತ್ತಿದ್ದರು ಎನ್ನುವ ಮಾಹಿತಿಯನ್ನು ತಿರುಮಲ ಬಳ್ಳಾಲರು ನೀಡುತ್ತಾರೆ. ಪ್ರಾಚೀನ ವಸ್ತುಗಳ ಸಂಗ್ರಹಗಾರರೂ ಆಗಿರುವ ತಿರುಮಲ ಬಳ್ಳಾಲರು ತಮ್ಮ ಹಿರಿಯರು ಬಳಸುತ್ತಿದ್ದ ಹಲವು ಮರದ,ಲೋಹದ ಮತ್ತು ಮಣ್ಣಿನ ಪರಿಕರಗಳನ್ನೂ ತಮ್ಮ ಸಂಗ್ರಹದಲ್ಲಿ ಜೋಡಿಸಿಟ್ಟುಕೊಂಡಿದ್ದಾರೆ. ಅಲ್ಲದೆ ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ ದೈವಕ್ಕೆ ಸೇರಿದಂತಹ ರಾಜಮನೆತನದ ಹಿರಿಯರ ಕಾಲದ ದೈವದ ಆಭರಣಗಳನ್ನು ಇಡುವ ಮಣ್ಣಿನ ಮಡಿಕೆಯಾಕಾರದ ವಸ್ತುಗಳೂ ಇವರ ಸಂಗ್ರಹದಲ್ಲಿದೆ. ತುಳುನಾಡಿನ ಸೊಗಡಿನ ಚಿತ್ರ ಕಾಂತಾರ ಆಗಿರುವ ಕಾರಣ ಈ ಚಿತ್ರದ ಯಶಸ್ಸಿಗೆ ತುಳುನಾಡಿದ ಪಳಿಯುಳಿಕೆಗಳ ಕೊಡುಗೆಯೂ ಬೇಕಿದೆ.