LATEST NEWS
ಕುಮಟಾ ಮತ್ತು ಶಿರಸಿಯ ಗಲಭೆಗಳು ಬಿಜೆಪಿ ಪ್ರೇರಿತ : ಗೃಹ ಸಚಿವ ರಾಮಲಿಂಗ ರೆಡ್ಡಿ
ಕುಮಟಾ ಮತ್ತು ಶಿರಸಿಯ ಗಲಭೆಗಳು ಬಿಜೆಪಿ ಪ್ರೇರಿತ : ಗೃಹ ಸಚಿವ ರಾಮಲಿಂಗ ರೆಡ್ಡಿ
ಬೆಂಗಳೂರು,ಡಿಸೆಂಬರ್ 13 : ಹೊನ್ನಾವರದ ಪರೇಶ್ ಮೇಸ್ತ ಸಾವಿನ ಬಳಿಕ ಉತ್ತರ ಕನ್ನಡ ಜಿಲ್ಲೆ ಕುಮಟಾ ಮತ್ತು ಶಿರಸಿಯಲ್ಲಿ ನಡೆದ ಗಲಭೆ ಬಿಜೆಪಿ ಪ್ರೇರಿತ.
ಮುಂದಿನ ವಿಧಾನ ಸಭಾ ಚುನಾವಣೆಯ ಉದ್ದೇಶದಿಂದ ಬಿಜೆಪಿಯವರು ಎಸಗುತ್ತಿರುವ ಕೃತ್ಯ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ಅರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಗಲಭೆಗಳಿಗೆ ಪೋಲಿಸ್ ಇಲಾಖೆ ವೈಫಲ್ಯ ಕಾರಣವಲ್ಲ.
ಪರೇಶ್ ಮೇಸ್ತಾ ಸಾವಿಗೆ ಕಾರಣ ತಿಳಿಯುವ ಮುನ್ನವೇ ಅದೊಂದು ಕೊಲೆ ಎಂದು ಸುಳ್ಳು ಹೇಳುವುದರ ಜೊತೆಗೆ ಜನದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಬಿಜೆಪಿಯವರು ಉತ್ತರ ಕನ್ನಡ ಭಾಗದಲ್ಲಿ ಗಲಭೆಗೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣಗಳ ಮೂಲಕವೂ ಸುಳ್ಳು ಸುದ್ದಿಗಳನ್ನು ಹರಡಿಸುವ ಕಾರ್ಯ ಮಾಡುತ್ತಿದ್ದಾರೆ.
ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಕೃತ್ಯಗಳನ್ನು ಕೆಲವು ಹಿರಿಯ ಬಿಜೆಪಿ ಮುಖಂಡರು ಉದ್ದೇಶ ಪೂರ್ವಕವಾಗಿ ಮಾಡಿಸುತ್ತಿದ್ದಾರೆ.
ಅದಕ್ಕಾಗಿ ಹೊರಗಿನಿಂದ ಜನ ಕರೆಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ.
ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪರೇಶ್ ಸಾವಿಗೆ ಕಾರಣ ಗೊತ್ತಿಲ್ಲ. ಇದು ಹತ್ಯೆಯೇ? ಆತ್ಮಹತ್ಯೆಯೇ ಎಂಬುದು ಪೋಸ್ಟ್‌ಮಾರ್ಟಂ ವರದಿ ಬಂದ ಮೇಲಷ್ಟೇ ಗೊತ್ತಾಗುತ್ತದೆ.
ಪೋಸ್ಟ್‌ಮಾರ್ಟಂ ವರದಿ ಬರಲು ಇನ್ನೂ ಒಂದು ವಾರ ಬೇಕು. ಆದರೆ ಬಿಜೆಪಿ ನಾಯಕರು ತಾವೇ ವೈದ್ಯರು ಎನ್ನುವಂತೆ ಹತ್ಯೆಯ ಷರಾ ಬರೆದಿದ್ದಾರೆ ಎಂದು ಆರೋಪಿಸಿದರು.