LATEST NEWS
ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಿಸಿದ ಪೇಜಾವರ ಶ್ರೀ, ಕಾಣಿಯೂರು ಶ್ರೀ
ಉಡುಪಿ ಮಾರ್ಚ್ 20: ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಉಡುಪಿ ಅಷ್ಠಮಠದ ಯತಿಗಳಾದ ಉಡುಪಿಯ ಪೇಜಾವರ ಶ್ರೀ ಮತ್ತು ಕಾಣಿಯೂರು ಸ್ವಾಮೀಜಿ ಜೊತೆಯಾಗಿ ವೀಕ್ಷಣೆ ಮಾಡಿದರು. ಮೊಟ್ಟಮೊದಲ ಬಾರಿಗೆ ಮಾಲ್‍ಗೆ ತೆರಳಿದ ಸ್ವಾಮೀಜಿಗಳು ನೈಜ ಕತೆಯಾಧಾರಿತ ಚಿತ್ರ ವೀಕ್ಷಣೆ ಮಾಡಿದರು.
ಕಾಶ್ಮೀರಿ ಪಂಡಿತರ ಸಂಕಟಗಳನ್ನು ಎಳೆಯಾಗಿ ಬಿಚ್ಚಿಟ್ಟಿರುವ ಕಾಶ್ಮೀರಿ ಫೈಲ್ಸ್ ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಮುಗಿ ಬಿದ್ದು ಹೋಗುತ್ತಿದ್ದಾರೆ. ಕೇವಲ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲ ಗಣ್ಯರು ಮತ್ತು ಸಂತರನ್ನು ಕೂಡ ಈ ಸಿನಿಮಾ ಆಕರ್ಷಿಸಿದೆ. ಸಿನಿಮಾಗಳಿಗೆ ಯಾವತ್ತೂ ಕಾಲಿರಿಸಿದ ಮಠಾಧೀಶರನ್ನು ಕೂಡ ತನ್ನತ್ತ ಸೆಳೆಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಪೇಜಾವರ ಮಠಾಧೀಶರು ಕಾಶ್ಮೀರಿ ಫೈಲ್ಸ್ ಚಲನಚಿತ್ರ ನೋಡಿದರು. ಅಷ್ಟಮಠಾಧೀಶರಲ್ಲಿ ಒಬ್ಬರಾದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ರೊಂದಿಗೆ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಮಣಿಪಾಲದಲ್ಲಿ ಸಿನಿಮಾ ವೀಕ್ಷಿಸಿದರು.
ತಮ್ಮ ಜೊತೆಗೆ ಮಠದ 35 ಶಿಷ್ಯರನ್ನು ಕೂಡ ಕರೆದೊಯ್ದಿದ್ದರು. ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ಶನಿವಾರ ರಾತ್ರಿ ಕೊನೆಯ ಶೋ ನೋಡಲು ಯತಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ ಉರಿ ಚಲನಚಿತ್ರ ಬಿಡುಗಡೆಯಾದಾಗ ಪೇಜಾವರ ಮಠದ ಹಿರಿಯ ಯತಿಗಳಾದ ಕೀರ್ತಿಶೇಷ ವಿಶ್ವೇಶತೀರ್ಥರು ತಮ್ಮ ಶಿಷ್ಯರೊಂದಿಗೆ ಸಿನಿಮಾ ನೋಡಿದ್ದನ್ನು ಇಲ್ಲಿ ಸ್ಮರಿಸಬಹುದು.