LATEST NEWS
ಮಂಗಳೂರಿನಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ತರಕಾರಿ ರಪ್ತು

ಮಂಗಳೂರು ಡಿಸೆಂಬರ್ 14: ಮಂಗಳೂರಿನಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ಇದೇ ಮೊದಲ ಬಾರಿಗೆ ಇಂದು ಸರಕು ತುಂಬಿರುವ ಹಡಗು ಪ್ರಯಾಣ ಬೆಳಸಲಿದೆ.
ಮಂಗಳೂರಿನ ಹಳೇ ಬಂದರು ದಕ್ಕೆಯಲ್ಲಿ ನೌಕೆಗೆ ನಿನ್ನೆ ಸರಕು ಹೇರುವ ಕಾರ್ಯ ನಡೆಯುತ್ತಿದ್ದು, ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಮತ್ತು ಹಣ್ಣು ಹಂಪಲು ಸಾಗಾಟ ಮಾಡಲಿದ್ದು, ನಿನ್ನೆ ಕ್ರೇನ್‌ಗಳ ಮೂಲಕ ಹಡಗಿಗೆ ತುಂಬಿಸಲಾಗಿದೆ. ಹಡಗಿನಲ್ಲಿ ಹಣ್ಣು, ತರಕಾರಿಗಳು ಮತ್ತು ಜೈವಿಕ ಗೊಬ್ಬರಗಳನ್ನು ಹೊತ್ತೊಯ್ಯಲಾಗುವುದು ಎಂದು ಗುತ್ತಿಗೆದಾರ ಚರಣ್ ದಾಸ್ ಕರ್ಕೇರ ತಿಳಿಸಿದ್ದಾರೆ.

ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರೀನಿವಾಸನ್, ವಿಘ್ನೇಶ್ ಇಂದು ಪ್ರಥಮ ಬಾರಿಗೆ ಹಡಗು ಯಾನದಲ್ಲಿ ತೆರಳುತ್ತಿದ್ದಾರೆ. ಲಕ್ಷದ್ವೀಪದ ಕಡಂಬತ್ತ್ ಕಾರ್‌ಗೆ ಸೇರಿದ ಎಂಎಸ್‌ವಿ ನೂರ್ ಎ ಅಲ್ ಕದರಿ ಹೆಸರಿನ ನೌಕೆಯನ್ನು ಚರಣ್‌ದಾಸ್ ವಿ. ಕರ್ಕೇರ ಬಾಡಿಗೆಗೆ ಪಡೆದುಕೊಂಡು, ಸಾಮಾನು, ಸರಂಜಾಮು ಸಾಗಾಟ ಮಾಡುತ್ತಿದ್ದಾರೆ.
ನೌಕೆಯನ್ನು ತಿಂಗಳಿಗೆ 5 ಲಕ್ಷ ಬಾಡಿಗೆಗೆ ಪಡೆದುಕೊಳ್ಳಲಾಗಿದ್ದು, ತಿಂಗಳಿಗೆ ಎರಡು ಬಾರಿ ಮಾಲ್ಡೀವ್ಸ್ ಗೆ ತೆರಳಲಿದೆ. ಮಾಲ್ಡೀವ್ಸ್ ಗೆ ತಲುಪಲು ಸುಮಾರು 4 ರಿಂದ 5 ದಿನಗಳು ಬೇಕಾಗಬಹುದು, ಮಾಲ್ಡೀವ್ಸ್ ಜೆಟ್ಟಿಯಲ್ಲಿ ಅನ್ ಲೋಡ್ ಮಾಡಿ ಮರಳಿ ಬರಲಿದೆ.