LATEST NEWS
ರೋಗಿಯ ಸ್ಟೋನ್ ತೆಗೆಯುವ ನೆಪದಲ್ಲಿ ಕಿಡ್ನಿಯನ್ನೇ ತೆಗೆದ ಡಾಕ್ಟರ್.!

ಲಕ್ನೋ, ನವೆಂಬರ್ 14: ವ್ಯಕ್ತಿಯೊಬ್ಬನಿಗೆ ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆ ಮಾಡಿದ್ದ ಖಾಸಗಿ ಆಸ್ಪತ್ರೆಯ ವೈದ್ಯರು ಒಂದು ಕಿಡ್ನಿಯನ್ನೇ ತೆಗೆದ ಆಘಾತಕಾರಿ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.
ಕಸ್ಗಂಜ್ ಜಿಲ್ಲೆಯ ನಾಗ್ಲಾ ತಾಲ್ ಗ್ರಾಮದ ನಿವಾಸಿ ಸುರೇಶ್ ಚಂದ್ರ(53) ಎಂಬಾತ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತ ಏ.14ರಂದು ಅಲ್ಟ್ರಾಸೌಂಡ್ ಮಾಡಿಸಿಕೊಂಡಿದ್ದ. ಈ ವೇಳೆ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಆಪರೇಷನ್ ಮಾಡಿಸಿಕೊಳ್ಳಲು ತಿಳಿಸಿದ್ದಾರೆ.
ವೈದ್ಯರ ಸೂಚನೆ ಮೇರೆಗೆ ಏ.14ರಂದು ಆತ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಡಿದ್ದ. ಅದಾದ ಬಳಿಕ ವೈದ್ಯರು ಕಲ್ಲುಗಳನ್ನು ತೆಗೆಯಲಾಗಿದೆ ಎಂದು ಕೆಲವು ಔಷಧಿಗಳನ್ನು ನೀಡಿದರು. ಸುರೇಶ್ ಏ.17ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ.
ಆದರೆ ಅದಾದ ಕೆಲ ತಿಂಗಳ ಬಳಿಕ ಸುರೇಶ್‍ಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಲ್ಟ್ರಾಸೌಂಡ್ ಮಾಡಿಸಿಕೊಂಡಿದ್ದಾನೆ. ಆ ವೇಳೆ ಒಂದು ಕಿಡ್ನಿಯೇ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಸಿಎಂಒಗೆ ದೂರು ನೀಡಿದ್ದು, ತನಿಖೆ ಆರಂಭಿಸಿದೆ. ಆದರೆ ಈ ಬಗ್ಗೆ ಆಸ್ಪತ್ರೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
