DAKSHINA KANNADA
ಪೇರಡ್ಕ ಚರ್ಚ್ನಲ್ಲಿ ಶಿಲುಬೆಗೆ ಹಾನಿ ಮಾಡಿದ್ದಲ್ಲದೇ ಭಗವಾಧ್ವಜ ಹಾರಿಸಿದ ಕಿಡಿಗೇಡಿಗಳು
ಕಡಬ, ಮೇ 06: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಪೇರಡ್ಕದ ‘ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್’ ಚರ್ಚ್ನಲ್ಲಿ ಅಪರಿಚಿತರು ದಾಂಧಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ. ಈ ಚರ್ಚ್ನ ಫಾದರ್ ಆಗಿರುವ ಫಾ| ಜೋಸ್ ವರ್ಗಿಸ್ ಬಿನ್ ವರ್ಗೀಸ್ ಅವರು ಕಡಬ ಠಾಣೆಯಲ್ಲಿ ನಿನ್ನೆ ಸಂಜೆ ದೂರು ದಾಖಲಿಸಿದ್ದಾರೆ.
ಮೇ 1 ರಂದು ರಾತ್ರಿ ಯಾರೋ ಕಿಡಿಗೇಡಿಗಳು ಚರ್ಚ್ ಕಟ್ಟಡದ ಬಾಗಿಲನ್ನು ಒಡೆದು ಅಕ್ರಮ ಪ್ರವೇಶ ಮಾಡಿ ದಾಂಧಲೆ ಮಾಡಿದ್ದಾರೆ. ಕಟ್ಟಡದ ಮೇಲ್ಭಾಗದಲ್ಲಿದ್ದ ಕ್ರೈಸ್ತ ಶಿಲುಬೆಯನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಿ ಭಗವಾಧ್ವಜ ಅಳವಡಿಸಲಾಗಿದೆ. ಅಲ್ಲದೇ ಕಟ್ಟಡದ ಒಳಭಾಗದಲ್ಲಿದ್ದ ಪ್ರಾರ್ಥನಾ ಮಂದಿರದಲ್ಲಿ ಆಂಜನೇಯನ ಫೋಟೋ ಇರಿಸಿದ್ದಾರೆ.
ಇದಲ್ಲದೇ ಚರ್ಚ್ನಲ್ಲಿದ್ದ ವಿದ್ಯುತ್ ಮಿಟರ್, ಬಲ್ಬ್, ಪಂಪ್‌ಸೆಟ್ ಮತ್ತು ಪೈಪ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕಪಾಟುವನ್ನು ಹೊಡೆದು ನಾಶ ಮಾಡಿದ್ದಾರೆ. ಮೇ 4 ರಂದು ರಾತ್ರಿ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಕಂಬದಿಂದ ಸರ್ವಿಸ್ ವೈಯರ್ಗಳನ್ನು ಕಟ್ ಮಾಡಿ ಮಿಟರ್ ಬಾಕ್ಸ್ ಕೂಡ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
30 ವರ್ಷಗಳಿಂದ ಕಟ್ಟಡದ ತೆರಿಗೆ ಕಟ್ಟುತ್ತಿದ್ದು, ಪ್ರಾರ್ಥನಾ ಮಂದಿರ ಅಧಿಕೃತ ಅಂತ ದೂರಿನಲ್ಲಿ ಅವರು ಉಲ್ಲೇಖ ಮಾಡಿದ್ದಾರೆ. ಪ್ರಾರ್ಥನಾ ಮಂದಿರಕ್ಕೆ ಅಕ್ರಮ ಪ್ರವೇಶ ಮಾಡಿ ಧಾರ್ಮಿಕ ಕಲಹ ಎಬ್ಬಿಸಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಹ ಒತ್ತಾಯಿಸಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿದೆ.