LATEST NEWS
ವರುಣನ ಆರ್ಭಟಕ್ಕೆ ತತ್ತರಿಸಿದ ಮಹಾನಗರಿ ಮುಂಬೈ, ಜನ ಜೀವನ ಅಸ್ತವ್ಯಸ್ತ.!
ಮುಂಬೈ: ವರುಣನ ಆರ್ಭಟಕ್ಕೆ ಮಹಾನಗರಿ ಮುಂಬೈ ತತ್ತರಿಸಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆ ಕಾರಣ 36 ವಿಮಾನಗಳ ಸಂಚಾರ ಸ್ಥಗಿತಗೊಳಿಬೇಕಾಯಿತು.
ಭಾನುವಾರ ಬಿದ್ದ 152 ಮಿಲಿಮೀಟರ್ ಮಳೆ ಮಹಾ ನಗರಿ ಮೇಲೆ ಭಾರಿ ಪರಿಣಾಮ ಬೀರಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. 4.4 ಮೀಟರ್ ಎತ್ತರದ ದೈತ್ಯ ಅಲೆಗಳು ಅಪ್ಪಳಿಸಿದ್ದರಿಂದ ಮಹಾನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಭಾರಿ ಮಳೆಯಿಂದಾಗಿ ಭಾನುವಾರ ಎರಡು ಬಾರಿ ರನ್ ವೇ ಮುಚ್ಚಬೇಕಾಯಿತು. ಮಧ್ಯಾಹ್ನ 12.12 ರಿಂದ 12.20ರ ವರೆಗೆ ಮತ್ತು ಮಧ್ಯಾಹ್ನ 1.00 ರಿಂದ 1.15ರವರೆಗೆ ವಿಮಾನ ಸಂಚಾರ ಸ್ಥಗಿತಗೊಂಡಿತು. ಇದರಿಂದಾಗಿ ಹಲವು ವಿಮಾನಗಳ ಯಾನ ವಿಳಂಬವಾದರೆ 36 ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು. ಮುಂಬೈಗೆ ಆಗಮಿಸುತ್ತಿದ್ದ 15 ವಿಮಾನಗಳನ್ನು ಬೇರೆಡೆಗೆ ವರ್ಗಾಯಿಸಬೇಕಾಯಿತು.
ಸಂಜೆ ನಾಲ್ಕು ಗಂಟೆವರೆಗೆ ನಗರದಲ್ಲಿ 82 ಮಿಲಿ ಮೀಟರ್, ಪೂರ್ವ ಉಪನಗರದಲ್ಲಿ 96 ಮಿಲಿ ಮೀಟರ್, ಪಶ್ಚಿಮ ಉಪನಗರದಲ್ಲಿ 90 ಮಿಲಿ ಮೀಟರ್ ಮಳೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಪಶ್ಚಿಮ ಮತ್ತು ಕೇಂದ್ರೀಯ ರೈಲ್ವೆ ಮಾರ್ಗದ ಉಪನಗರ ರೈಲು ಸಂಚಾರ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಆದರೆ, ಕುರ್ಲಾ, ಪನ್ವೆಲ್ ಮತ್ತು ಮಾನಖುರ್ದ್ ರೈಲ್ವೆ ನಿಲ್ದಾಣಗಳ ಬಳಿ ನೀರು ನಿಂತಿದ್ದರಿಂದಾಗಿ ಮುಂಬೈನ ಹಾರ್ಬರ್ ಲೈನ್‌ನಲ್ಲಿ ರೈಲುಗಳ ಸಂಚಾರದಲ್ಲಿ 15ರಿಂದ 20 ನಿಮಿಷ ವಿಳಂಬವಾಯಿತು. ಇನ್ನು ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದಾಗಿ ಕೆಲವು ಬಸ್‌ಗಳ ಮಾರ್ಗಗಳನ್ನೂ ಬದಲಿಸಲಾಯಿತು ಎಂದು ತಿಳಿದುಬಂದಿದೆ.
ರತ್ನಗಿರಿಯ ಜಿಲ್ಲೆಯಲ್ಲಿ ಐದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುಂಬೈ–ಗೋವಾದ ರಸ್ತೆ ಮಾರ್ಗವು ಅಸ್ತವ್ಯಸ್ಥಗೊಂಡಿದೆ.