LATEST NEWS
ಶಿವನ ದೇವಸ್ಥಾನಕ್ಕಾಗಿ ಥೈಲ್ಯಾಂಡ್ ಕಾಂಬೋಡಿಯಾ ನಡುವೆ ಯುದ್ಧ – 12 ಮಂದಿ ಸಾವು

ಬ್ಯಾಕಾಂಕ್ ಜುಲೈ 25: ಗಡಿ ಸಮೀಪ ಇರುವ ಒಂದು ಶಿವನ ದೇವಾಲಯಕ್ಕಾಗಿ ಇದೀಗ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಯುದ್ದ ಪ್ರಾರಂಭವಾಗಿದೆ. ಗುರುವಾರ ಎರಡು ದೇಶಗಳ ಸೇನೆಗಳು ಗುರುವಾರ ಪರಸ್ಪರ ದಾಳಿ ನಡೆಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ. ಕಾಂಬೋಡಿಯಾದ ಮೇಲೆ ಥೈಲ್ಯಾಂಡ್ ಎಫ್ 16 ಬಳಸಿ ದಾಳಿ ನಡೆಸಿದೆ.
ರಾಕೆಟ್ ಮತ್ತು ಫಿರಂಗಿ ಶೆಲ್‌ಗಳನ್ನು ಥಾಯ್ಲೆಂಡ್ ಮೇಲೆ ಕಾಂಬೋಡಿಯಾ ಹಾರಿಸಿದೆ. ಥಾಯ್ಲೆಂಡ್ ಎಫ್-16 ಜೆಟ್ ಸಹಾಯದಿಂದ ವೈಮಾನಿಕ ದಾಳಿ ನಡೆಸಿದೆ. ಕಾಬೋಡಿಯಾದ ಭೂಸೇನೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಥಾಯ್ಲೆಂಡ್ ಸೇನೆ ತಿಳಿಸಿದೆ. ಒಬ್ಬರು ಸೈನಿಕರು ಮತ್ತು 11 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಪೆಟ್ರೋಲ್ ಬಂಕ್‌ವೊಂದರ ಮೇಲೆ ರಾಕೆಟ್ ದಾಳಿ ನಡೆದಿದ್ದು, ಹೆಚ್ಚಿನವರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. 35 ನಾಗರಿಕರು ಗಾಯಗೊಂಡಿದ್ದಾರೆ’ ಎಂದು ಥಾಯ್ಲೆಂಡ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಗಡಿಯುದ್ದಕ್ಕೂ ಕನಿಷ್ಠ ಆರು ಪ್ರಾಂತ್ಯಗಳಲ್ಲಿ ಘರ್ಷಣೆ ಮುಂದುವರೆದಿದೆ ಎಂದು ಥಾಯ್ಲೆಂಡ್ ರಕ್ಷಣಾ ಸಚಿವಾಲಯದ ವಕ್ತಾರ ಸುರಸಂತ್ ಕೊಂಗ್ರಿರಿ ಹೇಳಿದ್ದಾರೆ.
ಈ ಯುದ್ದಕ್ಕೆ ಪ್ರಮುಖ ಕಾರಣ 11 ನೇ ಶತಮಾನದ ಪ್ರಿಯಾ ವಿಹಾರ್ ದೇವಾಲಯ. ಈ ದೇವಾಲಯವು ಕಾಂಬೋಡಿಯಾದ ಪ್ರಿಯಾ ವಿಹಾರ್ ಪ್ರಾಂತ್ಯ ಮತ್ತು ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಗಡಿಯಲ್ಲಿದೆ. 1962 ರಲ್ಲಿ, ಅಂತರರಾಷ್ಟ್ರೀಯ ನ್ಯಾಯಾಲಯ (ICJ) ಈ ದೇವಾಲಯವು ಕಾಂಬೋಡಿಯಾಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಭೂಮಿ ತನಗೆ ಸೇರಿದೆ ಎಂದು ಥೈಲ್ಯಾಂಡ್ ಹೇಳುತ್ತದೆ. ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಖಮೇರ್ ಚಕ್ರವರ್ತಿ ಸೂರ್ಯವರ್ಮನ್ ಶಿವನಿಗಾಗಿ ನಿರ್ಮಿಸಿದ್ದಾರೆ .ಕಾಲಾನಂತರದಲ್ಲಿ, ಈ ದೇವಾಲಯವು ಕೇವಲ ನಂಬಿಕೆಯ ಕೇಂದ್ರವಲ್ಲ, ಆದರೆ ರಾಷ್ಟ್ರೀಯತೆ, ರಾಜಕೀಯ ಮತ್ತು ಮಿಲಿಟರಿ ಶಕ್ತಿಯ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿ ಇನ್ನೂ ಶಿವಲಿಂಗವಿದೆ.