KARNATAKA
ಕೇಸರಿ-ಹಿಜಾಬ್ ಸಂಘರ್ಷಕ್ಕೆ ಹೈದರಾಬಾದ್ ಮುಸ್ಲಿಮರ ಆಗಮನ
ಉಡುಪಿ, ಫೆಬ್ರವರಿ 08: ಕುಂದಾಪುರದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕೇಸರಿ-ಹಿಜಾಬ್ ಸಂಘರ್ಷ ತಾರಕಕ್ಕೇರಿದ್ದು, ದಿನೇದಿನೆ ಪರಿಸ್ಥಿತಿ ಸಂಕೀರ್ಣವಾಗುತ್ತಿದೆ. ತನ್ಮಧ್ಯೆ ಈ ಪ್ರಕರಣಕ್ಕೆ ಹೈದರಾಬಾದ್ ಮುಸ್ಲಿಮರ ಪ್ರವೇಶವಾಗಿರುವುದು ಪರಿಸ್ಥಿತಿ ಸದ್ಯಕ್ಕೆ ತಿಳಿಯಾಗುವಂತಿಲ್ಲ.
ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಬೇಕು ಎಂದು ಕೋರಿ ಮುಸ್ಲಿಂ ಯುವತಿಯರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ಹಿಂದೂ ಸಮುದಾಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಆಗಮಿಸುತ್ತಿದ್ದಾರೆ. ಅವರಿಗೆ ಹಿಜಾಬ್ ಧರಿಸಿ ತರಗತಿ ಹಾಜರಾಗಲು ಅನುಮತಿ ಕೊಟ್ಟರೆ ನಾವು ಕೇಸರಿ ಶಾಲು ಮುಂತಾದವನ್ನು ಧರಿಸಿಕೊಂಡು ಬಂದು ಕ್ಲಾಸಲ್ಲಿ ಕೂರುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ನಡುವೆ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಹೋರಾಟಕ್ಕೆ ಬೆಂಬಲ ಸೂಚಿಸಿ ಹೈದರಾಬಾದ್ ಮುಸ್ಲಿಮರ ಪ್ರವೇಶವಾಗಿದೆ. ಸಲ್ಮಾನ್ ಎಂಬಾತನ ನೇತೃತ್ವದಲ್ಲಿ ಬಂದಿರುವ ಹೈದರಾಬಾದ್ನ ಒಂದಷ್ಟು ಮುಸ್ಲಿಮರು, ರಾಜ್ಯ ಸರ್ಕಾರ ಮುಸ್ಲಿಮರಿಗೆ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳು ನಮ್ಮ ತೆರಿಗೆ ದುಡ್ಡಿನಿಂದ ನಡೆಯುತ್ತಿವೆ, ಇಲ್ಲಿ ನಮ್ಮ ಭಾವನೆಗಳನ್ನೂ ಗೌರವಿಸಬೇಕು ಎಂದಿರುವ ಅವರು, ಹಿಜಾಬ್ ತೊಡುವ ಅಧಿಕಾರಕ್ಕಾಗಿ ನಾವು ಸುಪ್ರೀಂಕೋರ್ಟ್ಗೂ ಹೋಗಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.