DAKSHINA KANNADA
ತುಳು ಲಿಪಿಗೆ ಯುನಿಕೋಡ್ ಮಾನ್ಯತೆ, ತುಳು ಸಾಹಿತ್ಯ ಅಕಾಡೆಮಿ ಹರ್ಷ
ಮಂಗಳೂರು : ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.
ಹಲವು ತಜ್ಞರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ 2017 ರಲ್ಲಿ ಅಂದಿನ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ವಿಷಯ ಸಮನ್ವಯತೆಗಾಗಿ ತಜ್ಞರ ಸಮಿತಿ ರಚಿಸಿ ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ನಂತರದ ದಿನಗಳಲ್ಲಿ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಯನ್ನು, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವಂತೆ ಮಾಡಿದ್ದಾರೆ.
ತುಳು ಲಿಪಿಯನ್ನು ಯೂನಿಕೋಡ್ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ.ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್.ವಿಘ್ನರಾಜ್ , ಆಕಾಶ್ ರಾಜ್ ಸೇರಿದಂತೆ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ.
ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜೊತೆಗೆ ತುಳು -ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ .
ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆತಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಇನ್ನಷ್ಟು ಹೆಚ್ಚಿನ ಮಹತ್ವ ಬಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.